ಧಮ್ಮಧ್ಯಾನದಿಂದ ಮಾನಸಿಕ ನೆಮ್ಮದಿ ವೃದ್ಧಿ:ಭಂತೆ ಧಮ್ಮನಾಗ್
ಮಂಡ್ಯ, ನ.5: ಧಮ್ಮಧ್ಯಾನದಿಂದ ಮಾನಸಿಕ ನೆಮ್ಮದಿ ವೃದ್ಧಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಲಂಡನ್‍ನ ಬೌದ್ಧ ವಿಹಾರದ ಭಂತೆ ಧಮ್ಮನಾಗ್, ಧಮ್ಮಧ್ಯಾನದಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಎಂದಿದ್ದಾರೆ.
ನಗರದ ಕುವೆಂಪು ನಗರದಲ್ಲಿರುವ ಅಷ್ಠಾಂಗಮಾರ್ಗ ಧ್ಯಾನ ಕೇಂದ್ರದಲ್ಲಿ ಭಾರತೀಯ ಬೌದ್ಧ ಮಹಾ ಸಭಾ ಹಾಗು ಭಾರತೀಯ ಬೌದ್ಧ ಟ್ರಸ್ಟ್ ರವಿವಾರ ಆಯೋಜಿಸಿದ್ದ ಧ್ಯಾನ ಮತ್ತು ಧಮ್ಮೋಪದೇಶ ಹಾಗು ಅಶೋಕ ಟಿ.ವಿ. ಮಾಧ್ಯಮ ಪರಿಚಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದೇಶ ಪುಣ್ಯಭೂಮಿಯಲ್ಲಿ ಭಗವಾನ್ ಬುದ್ದುರು ಹುಟ್ಟಿ ದು:ಖ ಮತ್ತು ಆಸೆಗೆ ಕಾರಣಗಳನ್ನು ಪಂಚಶೀಲ ಮತ್ತು ಅಷ್ಠಾಂಗಮಾರ್ಗದ ಮೂಲಕ ಲೋಕಕಲ್ಯಾಣಾರ್ಥವಾಗಿ ಭೋದಿಸಿದ್ದಾರೆ. ಆದರೆ, ಅವುಗಳನ್ನು ಅನುಸರಿಸುವ ಔದಾರ್ಯವನ್ನು ಕಳೆದುಕೊಂಡಿದ್ದೇವೆ ಎಂದು ಅವರು ವಿಷಾದಿಸಿದರು.
ಬುದ್ದರ ಧಮ್ಮತತ್ವಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಅಳವಡಿಸಿಕೊಂಡು ವಿಶ್ವಜ್ಞಾನಿಯಾಗಿ ಅರಳಿದರು; ಇತರರರು ದೂಷಿಸಿ ಸಣ್ಣವರಾದರು. ಇನ್ನಾದರೂ ಮನುಷ್ಯರಾದ ನಾವುಗಳು ಮಾನವೀಯ ಮೌಲ್ಯ ಮತ್ತು ಧಮ್ಮತ್ವವನ್ನು ಪಡೆದುಕೊಳ್ಳೋಣ ಎಂದು ಅವರು ಸಲಹೆ ಮಾಡಿದರು.
ಚಾಮರಾಜನಗರದ ನಳಂದ ಬೌದ್ಧ ವಿಶ್ವವಿದ್ಯಾಲಯದ ಸಂಸ್ಥಾಪಕ ಕಾರ್ಯದರ್ಶಿ ಭಂತೆ ಬೋಧಿದತ್ತ ಮಾತನಾಡಿ, ಮುಂಬರುವ ಡಿಸೆಂಬರ್ ಅಥವಾ ಜನವರಿ ತಿಂಗಳ ದಿನಗಳಲ್ಲಿ ವಿಶ್ವ ಬೌದ್ಧ ಮಹಾಸಮ್ಮೇಳನವನ್ನು ಆಯೋಜಿಸಲು ಚಿಂತನೆ ನಡೆಯುತ್ತಿದೆ ಎಂದರು.
ರಾಜ್ಯ ಸರಕಾರ ನಳಂದ ವಿವಿಗೆ 25 ಎಕರೆ ಜಮೀನು ನೀಡಿರುವುದಲ್ಲದೆ ಅಲ್ಲಿ ನಳಂದ ಬೌದ್ಧ ವಿಶ್ವವಿದ್ಯಾಲಯ ಸ್ಥಾಪನೆಗೆ 10 ಕೋಟಿ ರೂ, ಗಳನ್ನು ಸಹ ಸಹ ಅನುದಾನ ನೀಡಿದೆ ಎಂದು ಅವರು ತಿಳಿಸಿದರು.
ಪ್ರಾಚೀನ ಭಾರತದ ಮಣ್ಣಿನಲ್ಲಿ ನಿರ್ಮಾಣಗೊಂಡಿದ್ದ ನಳಂದ ವಿಶ್ವವಿದ್ಯಾಲಯವನ್ನು ಮತ್ತೆ ನಿರ್ಮಾಣ ಮಾಡಲು ಸಾರ್ವಜನಿಕರು ಉದಾರತೆಯನ್ನು ಮೆರೆಯಬೇಕು. ಬುದ್ದರ ಧಮ್ಮೋಪದೇಶ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಬೌದ್ಧತತ್ವಗಳನ್ನು ಸಾರುವ ಕೇಂದ್ರವಾಗಿ ಬೆಳೆಸಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದಲ್ಲಿ ಬೌದ್ಧ ಧಮ್ಮದ ಸಂದೇಶ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಧಮ್ಮತತ್ವಗಳನ್ನು ಸಾರ್ವಜನಿಕರಿಗೆ ತಲುಪಿಸುವ ಮಾಧ್ಯಮ ಅವಶ್ಯಕತೆ ಇತ್ತು. ಅದು ಅಶೋಕ ಟಿ.ವಿ. ಮೂಲಕ ಈಡೇರುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಬೆಳಕು ಸಮಾಜ ಆಯೋಜಿಸಿದ್ದ ಭಗವಾನ್ ಬುದ್ದರ ಜೀವನ ಚರಿತ್ರೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ವಿಚಾರವಾದಿ ಕೆ.ಮಾಯಿಗೌಡ, ಅಶೋಕ ಟಿ.ವಿ. ಮಾಧ್ಯಮ ನಿರ್ದೇಶಕ ಸುರೇಶ್ ಎಸ್.ಕಾಣೇಕರ್, ಭಾರತೀಯ ಬೌದ್ಧ ಮಹಾ ಸಭಾದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಭಾಲ್ಕಿ, ಜಿಲ್ಲಾಧ್ಯಕ್ಷ ಶಿವರಾಜ್, ಸುಂಡಹಳ್ಳಿ ನಾಗರಾಜ್, ಎಸ್.ಸಿದ್ದಯ್ಯ, ಎಂ.ಬಿ.ಶ್ರೀನಿವಾಸ್, ವಕೀಲ ಬಾಲಸುಂದರಂ, ತಾಳಶಾಸನ ಮೋಹನ್, ಮಾಣಿಕ್ಯನಹಳ್ಳಿ ಜಯರಾಮು, ಆಟೋ ದಿನೇಶ್, ಇತರ ಗಣ್ಯರು ಉಪಸ್ಥಿತರಿದ್ದರು.