ಸರಕಾರದ ಭ್ರಷ್ಟಾಚಾರದ ಬಗ್ಗೆ ದಾಖಲೆ ಇದ್ದರೆ ಬಿಡುಗಡೆ ಮಾಡಿ : ಡಾ.ಜಿ. ಪರಮೇಶ್ವರ್ ಸವಾಲು
ತುಮಕೂರು,ನ.05:ರಾಜ್ಯದಲ್ಲಿ ನಾಲ್ಕುವರೆ ವರ್ಷಗಳ ಕಾಲ ಸಧೃಡ ಆಡಳಿತ ನಡೆಸಿ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿರುವ ರಾಜ್ಯ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿಗಳು ಮತ್ತು ಸಚಿವರ ಮೇಲೆ ಬಿಜೆಪಿ ಭ್ರಷ್ಟಾಚಾರದ ಆರೋಪ ಹೊರಿಸುತ್ತಿದ್ದು,ಅವರಿಗೆ ದೈರ್ಯವಿದ್ದರೆ ಎಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನುವುದರ ಬಗ್ಗೆ ದಾಖಲೆ ಸಮೇತ ಬಹಿರಂಗಪಡಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,ರಾಜ್ಯದಲ್ಲಿ ಅಧಿಕಾರದಲ್ಲಿರುವ ನಮ್ಮ ಕಾಂಗ್ರೆಸ್ ಸರಕಾರ ಸ್ವಚ್ಚ, ಸಧೃಡ ಆಡಳಿತ ನೀಡುತ್ತಿದೆ.ರಾಜ್ಯದಲ್ಲಿ ಬಂಡವಾಳ ಹೂಡಲು ಬೇರೆ ಬೇರೆ ದೇಶಗಳಿಂದ ಕೈಗಾರಿಕೋಧ್ಯಮಿಗಳು ಮುಂದೆ ಬಂದಿದ್ದಾರೆ.ಇಷ್ಟಿದ್ದರೂ ಬಿಜೆಪಿಯವರು ಯಾವುದೇ ದಾಖಲೆ ಇಲ್ಲದೆ ಬರಿ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ ನಡೆಸುತ್ತಿದೆ.ಯಾರ ಪರಿವರ್ತನೆಯಾಗಬೇಕು ಎಂದು ಪ್ರಶ್ನಿಸಿದ ಅವರು,ಐದು ವರ್ಷ ಆಡಳಿತ ನಡೆಸಿದ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಸಚಿವ ಸಂಪುಟದ ಸಚಿವರು ಜೈಲಿಗೆ ಹೋಗಿ ಬಂದಿದ್ದೇವೆ.ಈಗ ನಮ್ಮ ಮನ ಪರಿವರ್ತನೆಯಾಗಿದೆ.
ಕಾಯ, ವಾಚ, ಸರಿ ಇದ್ದೇವೆ ಎಂದು ಹೇಳಲು ಈ ಯಾತ್ರೆ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದ ಅವರು,ಪರಿವರ್ತನಾ ಯಾತ್ರೆಯನ್ನು ಆರಂಭದಲ್ಲೆ ಅವರ ಕಾರ್ಯಕರ್ತರೆ ವಿಫಲಗೊಳಿಸಿದರು.ಲಕ್ಷಾಂತರ ಜನರನ್ನು ಸೇರಿಸುವ ಭರವಸೆ ವಿಫಲವಾಯಿತ್ತು.ಇನ್ನು ಜಿಲ್ಲೆಯ ತುರುವೇಕೆರೆ, ಕುಣಿಗಲ್, ತುಮಕೂರಿನಲ್ಲಿ ಆಗಿರುವ ಘಟನೆಗಳು ಅವರ ಪರಿವರ್ತನಾ ರ್ಯಾಲಿ ವಿಫಲವಾಗಿದೆ ಎನ್ನುವುದು ತೋರಿಸುತ್ತಿದೆ ಎಂದು ಡಾ.ಪರಮೇಶ್ವರ್ ನುಡಿದರು.
ಸಚಿವ ಜಾರ್ಜ್ ರಾಜಿನಾಮೆಯನ್ನು ಕೇಳುವ ನೈತಿಕತೆ ಬಿಜೆಪಿಗಿಲ್ಲ.ಸಿಬಿಐ ತನಿಖೆಯನ್ನು ರಾಜಕೀಯ ಕಾರಣಕ್ಕಾಗಿ ಮಾಡಲಾಗುತ್ತಿದೆ.ಈಗಾಗಲೇ ಈ ಬಗ್ಗೆ ತನಿಖೆಯಾಗಿ ಕ್ಲೀನ್ ಚಿಟ್ ಸಿಕ್ಕಿದೆ.ದುರುದ್ದೇಶ ಪೂರಿತವಾಗಿ ಅವರ ಮೇಲೆ ಎಫ್‍ಐಆರ್ ಹಾಕಿಸಲಾಗಿದೆ.ನಮಗೆ ಯಾವುದೇ ಸಿಬಿಐ ತನಿಖೆ ನಡೆದರು ಭಯವಿಲ್ಲ ಸತ್ಯ ಹೊರಬರುತ್ತದೆ.ಈ ವಿಷಯವನ್ನು ಕುರಿತು ಬಿಜೆಪಿಯವರು ಸದನವನ್ನು ಹಾಳು ಮಾಡಿದರೆ,ರಾಜ್ಯದ ಜನ ಗಮನಿಸುತ್ತಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಚಿವ ಟಿ.ಬಿ.ಜಯಚಂದ್ರ,ಸಂಸದ ಎಸ್.ಪಿ ಮುದ್ದಹನುಮೇಗೌಡ, ಎಐಸಿಸಿ ಕಾರ್ಯದರ್ಶಿ ಮಧು ಯಾಸ್ಕಿ ಗೌಡ,ಶಾಸಕರುಗಳಾದ ಕೆ.ಎನ್.ರಾಜಣ್ಣ, ಷಡಾಕ್ಷರಿ,ಡಾ.ಎಸ್.ರಫೀಕ್‍ಅಹಮದ್,ಮಾಜಿ ಸಚಿವ ವೆಂಕಟರಮಣಪ್ಪ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್ ರಾಮಕೃಷ್ಣ ಬಾಗವಹಿಸಿದ್ದರು.