×
Ad

ಶೀಘ್ರದಲ್ಲೇ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ: ಸಚಿವ ಯು.ಟಿ.ಖಾದರ್

Update: 2017-11-06 17:49 IST

ಮೂಡಿಗೆರೆ, ನ.6: ರಾಜ್ಯದಲ್ಲಿ 30 ಲಕ್ಷ ಹೊಸ ಪಡಿತರ ಚೀಟಿಗೆ ಫಲಾನುಭವಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಬಂದಿದ್ದು, ಶೀಘ್ರದಲ್ಲೇ ಹೊಸ ಪಡಿತರ ಚೀಟಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.

ಪಟ್ಟಣದ ಸಬ್ಬೇನಹಳ್ಳಿ ಪ್ಲಾಝಾದಲ್ಲಿರುವ ಕಾಂಗ್ರೆಸ್ ಮುಖಂಡ ಮೊಹಮ್ಮದ್ ಇರ್ಷಾದ್ ಅವರ ಕಚೇರಿಗೆ ಭೇಟಿ ನೀಡಿದ ವೇಳೆ ಅವರಿಂದ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ನ್ಯಾಯಬೆಲೆ ಅಂಗಡಿಗಳ ಮೂಲಕ ಪಡಿತರ ಆಹಾರ ಧಾನ್ಯ ವಿತರಣೆ ಹಾಗೂ ಅರ್ಹ ಫಲಾನುಭವಿಗಳಿಗೆ ಬಿಪಿಎಲ್ ಮತ್ತು ಎಪಿಎಲ್ ಹೊಸ ಪಡಿತರ ಚೀಟಿ ವಿತರಣೆಗೆ ಅರ್ಜಿ ಸಲ್ಲಿಕೆ ಎಲ್ಲವೂ ಪಾರದರ್ಶಕವಾಗಿರಲೆಂದು ಆನ್ ಲೈನ್ ಮೂಲಕವೇ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಪಕ್ಷದಿಂದ ಮನೆ ಮನೆ ಭೇಟಿ ಕಾರ್ಯ ಬರದಿಂದ ಸಾಗಿದೆ. ಸರಕಾರದ ಕಾರ್ಯಕ್ರಮಗಳನ್ನು ಜನರಿಗೆ ಈ ಮೂಲಕ ತಿಳಿಸಲಾಗುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ಪರವಾಗಿದ್ದಾರೆ. ಇದು ಮುಂದಿನ ಚುನಾವಣೆಗೆ ಸಹಕಾರಿಯಾಗಲಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಕದ ಸರಕಾರ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಇತ್ತೀಚೆಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ, ಡಾ. ವೀರೇಂದ್ರ ಹೆಗಡೆ ಉಜಿರೆಯಲ್ಲಿ ಆಯೋಜಿಸಿದ್ದ ಗ್ರಾಮಾಭಿವೃದ್ಧಿ ಯೋಜನೆಯ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪುಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುವಷ್ಟು ದೊಡ್ಡ ಶಕ್ತಿಯಾಗಿ ಮೋಟಮ್ಮ ಅವರ ಯೋಜನೆ ಫಲಶೃತಿಗೊಂಡಿದೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮೋಟಮ್ಮ ಅವರನ್ನು ಗೆಲ್ಲಿಸಲು ಯುವಕರು ಪಣತೊಡಬೇಕೆಂದು ಕರೆ ನೀಡಿದರು. 

ಕಾರ್ಯಕ್ರಮದಲ್ಲಿ ಕೆಪಿಸಿಸಿ ಕಾರ್ಮಿಕ ವಿಭಾಗದ ಯುವ ವಿಂಗ್‍ನ ರಾಜ್ಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಇರ್ಷಾಧ್ ಅಧ್ಯಕ್ಷತೆ ವಹಿಸಿದ್ದರು. ಎಂಎಲ್‍ಸಿ ಮೋಟಮ್ಮ, ರಾಜ್ಯ ಬ್ಯಾರಿ ಅಕಾಡಮಿ ಸದಸ್ಯ ಕಿರುಗುಂದ ಅಬ್ಬಾಸ್, ಪಪಂ ಸದಸ್ಯರಾದ ಕೆ.ವೆಂಕಟೇಶ್, ಪಾರ್ವತಮ್ಮ, ಟಿ.ಎ.ಮದೀಶ್, ಕಲೀಮುಲ್ಲಾ, ಮುಂಖಡರಾದ ಮಂಚೇಗೌಡ, ಬೀಜವಳ್ಳಿ ಇಸ್ಮಾಯೀಲ್, ನಗರ ಕಾಂಗ್ರೆಸ್ ಅಧ್ಯಕ್ಷ ನದೀಮ್ ಪಾಷಾ, ಅಬ್ದುಲ್ಲಾ ಬೀಜವಳ್ಳಿ ಮತ್ತಿತರರಿದ್ದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 32ಸಾವಿರ ಅರ್ಜಿಗಳು ಆನ್‍ಲೈನ್ ಮೂಲಕ ಬಂದಿವೆ. ಈಗಾಗಲೇ 20ಸಾವಿರ ಪಡಿತರ ಚೀಟಿ ವಿತರಿಸಲಾಗಿದೆ. ಉಳಿದಂತೆ 12 ಸಾವಿರ ಕಾರ್ಡ್ ಮುದ್ರಣಕ್ಕೆ ಹೋಗಿದೆ. ಸಧ್ಯದಲ್ಲಿಯೇ ಅದನ್ನು ವಿತರಿಸಲಾಗುವುದು. ನ್ಯಾಯ ಬೆಲೆ ಅಂಗಡಿಗಳಲ್ಲಿ ಅಥವಾ ಹೊಸ ಪಡಿತರ ಚೀಟಿ ವಿತರಣೆ ವೇಳೆ ಅಧಿಕಾರಿಗಳು ಮತ್ತು ನ್ಯಾಯಬೆಲೆ ಅಂಗಡಿ ಮಾಲಕರು ಫಲಾನುಭವಿಸಗಳನ್ನು ಸತಾಯಿಸಿದರೆ ಆಹಾರ ಇಲಾಖೆ ಹೆಲ್ಪ್‍ಲೈನ್‍ಗೆ ಕರೆ ಮಾಡಿ ದೂರು ನೀಡಬಹುದು. ಹೆಲ್ಪ್ ಲೈನ್ ಸಂಖ್ಯೆಯನ್ನು ಆಯಾ ನ್ಯಾಯಬೆಲೆ ಅಂಗಡಿ ಸಹಿತಿ ಆಹಾರ ಇಲಾಖೆ ಕಚೇರಿಗಳಲ್ಲಿ ಸಾರ್ವಜನಿಕರ ಮಾಹಿತಿಗಾಗಿ ಹಾಕಲಾಗಿದೆ.
-ಯು.ಟಿ.ಖಾದರ್,  ಗ್ರಾಹಕ ವ್ಯವಹಾರಗಳ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News