×
Ad

ಸಾಮಾಜಿಕ ಪರಿವರ್ತನೆಗೆ ಕನಕದಾಸರ ಕೀರ್ತನೆಗಳು ದಾರಿ ದೀಪ: ಸಚಿವ ಜಯಚಂದ್ರ

Update: 2017-11-06 19:20 IST

ತುಮಕೂರು, ನ.6: ಕನಕದಾಸರ ಕುಲ ಕುಲವೆಂದು ಹೊಡೆದಾಡದಿರಿ ಎನ್ನುವ ಗೀತೆಯಂತೆ ಸಮಾಜದಲ್ಲಿ ನಾವೆಲ್ಲಾ ಸಾಮರಸ್ಯದಿಂದ ಒಂದಾಗಿ ಬದುಕೋಣ ಎಂದು ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಸಣ್ಣ ನೀರಾವರಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಮಹಾನಗರ ಪಾಲಿಕೆ, ಕಾಳಿದಾಸ ವಿದ್ಯಾವರ್ಧಕ ಸಂಘ ಹಾಗೂ ವಿವಿಧ ಕುರುಬರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಗರದ ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿಂದು ಏರ್ಪಡಿಸಿದ್ದ 530ನೆ 'ಸಂತ ಶ್ರೇಷ್ಠ ಕನಕದಾಸ' ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತಿದ್ದ ಅವರು, ಕನಕರ ಈ ಗೀತೆಗೆ ಜನರನ್ನು ಒಗ್ಗೂಡಿಸುವ ಶಕ್ತಿಯಿದೆ. ಆದರೆ, ಇದನ್ನು ಅನುಸರಿಸದೇ ನಾವು  ಜಾತಿ, ಧರ್ಮವೆಂಬ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ದೇವರ ದೃಷ್ಟಿಯಲ್ಲಿ ನಾವೆಲ್ಲರೂ ಒಂದೇ ಎಂಬುದನ್ನು  ಮನಗಾಣಬೇಕು. ಸಾಮಾಜಿಕ ಪರಿವರ್ತನೆಗೆ ಕನಕರ ಕೀರ್ತನೆಗಳು ದಾರಿ ದೀಪವಾಗಿವೆ. ಕನಕದಾಸರು ಸುಮಾರು 500 ವರ್ಷಗಳ ಹಿಂದೆಯೇ ಅತ್ಯಂತ ಸರಳ ಭಾಷೆ ಬಳಸಿ ರಚಿಸಿದ 250ಕ್ಕೂ ಹೆಚ್ಚು ಕೀರ್ತನೆಗಳು ಸಾರ್ವಕಾಲಿಕವಾಗಿದ್ದು, ಮೇಲು-ಕೀಳೆಂಬ ಭ್ರಮೆಯಲ್ಲಿರುವವರನ್ನು ಬಡಿದೆಬ್ಬಿಸಿ ಮಾರ್ಗದರ್ಶನ ನೀಡುತ್ತವೆ ಎಂದು ತಿಳಿಸಿದರು.

ಇಂದಿನ ಯುವಕರು ಜಾತಿ ಧರ್ಮಗಳ ನಡುವೆ ಕಂದಕ ಸೃಷ್ಟಿ ಮಾಡುವ ದುಷ್ಟ ಶಕ್ತಿಗಳನ್ನು ಮಟ್ಟ ಹಾಕಿ ದೇಶದ ಅಭಿವೃದ್ಧಿಗೆ ಮುಂದಾಗಬೇಕು ಎಂದು ಕರೆ ನೀಡಿದ ಅವರು, ಜಿಲ್ಲಾಡಳಿತದ ವತಿಯಿಂದ ಕನಕದಾಸರ ಕೀರ್ತನೆಗಳನ್ನು ಮುದ್ರಿಸಿ ಪ್ರತಿಯೊಬ್ಬರ ಕೈಗೆ ತಲುಪಿಸುವಂತೆ ಮಾಡಿದರೆ ಮಾತ್ರ ಕನಕದಾಸರಿಗೆ ಗೌರವ ಸಲ್ಲಿಸಿದಂತಾಗುತ್ತದೆ. ಅಲ್ಲದೆ, ಆಂಗ್ಲಭಾಷೆ ಸೇರಿದಂತೆ ಮತ್ತಿತರ ಭಾಷೆಗಳಿಗೆ ಕನಕರ ಕೀರ್ತನೆಗಳನ್ನು ತರ್ಜುಮೆ ಮಾಡಿದರೆ ಕನ್ನಡದ ಶ್ರೀಮಂತಿಕೆ ಇನ್ನೂ ಹೆಚ್ಚಿದಂತಾಗುತ್ತದೆ ಎಂದು ಸಲಹೆ ನೀಡಿದರು.

ಶಾಸಕ ಡಾ.ಎಸ್.ರಫೀಕ್ ಅಹ್ಮದ್ ಮಾತನಾಡಿ, ಕನಕದಾಸರು ಕುರುಬ ಸಮುದಾಯದವರಿಗೆ ಮಾತ್ರ ಸೀಮಿತರಲ್ಲ. ಅಪಾರ ನಿಧಿ-ಸಂಪತ್ತು ಹೊಂದಿದ್ದರೂ ಅದನ್ನು ಸಮಾಜದ ಸೇವೆಗಾಗಿಯೇ ವ್ಯಯಿಸಿದ್ದರು. ನಗರದ ಸಿರಾಗೇಟ್‍ನ ಕನಕ ವೃತ್ತದಲ್ಲಿರುವ ಕನಕ ಪ್ರತಿಮೆಯ ಸ್ಥಳಾಂತರಕ್ಕೆ ಸಂಬಂಧಿಸಿದ ಪತ್ರವನ್ನು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿಗೆ ಕಳುಹಿಸಲಾಗಿದ್ದು, ಅನಮತಿ ಪತ್ರ ದೊರೆತ ನಂತರ ಶೀಘ್ರದಲ್ಲಿಯೇ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 7 ಮಂದಿಗೆ ಕನಕ ಪ್ರಶಸ್ತಿ ಹಾಗೂ 5 ಸಾವಿರ ರೂ. ನಗದು ನೀಡಿ ಪುರಸ್ಕರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹೇಶ್ ಪಿಯು ಕಾಲೇಜಿನ ಕನ್ನಡ ಅಧ್ಯಾಪಕ ಡಾ.ಕೆ.ಪಿ. ನಟರಾಜ್ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಟೂಡಾ ಮಾಜಿ ಅಧ್ಯಕ್ಷ ಶಿವಮೂರ್ತಿ, ಜಿ.ಪಂ ಸಿಇಒ ಕೆ.ಜಿ. ಶಾಂತರಾಮ್, ಎಸ್ಪಿ ದಿವ್ಯಾ ಗೋಪಿನಾಥ್, ಮಹಾನಗರ ಪಾಲಿಕೆ ಕಮೀಷನರ್ ಮಂಜುನಾಥಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಸವರಾಜಪ್ಪ ಅಪ್ಪಿನಕಟ್ಟೆ, ಸಮಾಜದ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News