ತುಮಕೂರು: ನ.9 ರಂದು ಜಿಲ್ಲಾ ಹೂಡಿಕೆದಾರರ ಸಮಾವೇಶ
ತುಮಕೂರು, ನ.6: ಎಸ್‍ಐಟಿಯ ಬಿರ್ಲಾ ಆಡಿಟೋರಿಯಂನಲ್ಲಿ ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆ ಆಯೋಜಿಸಲಾಗಿದೆ ಎಂದು ಕೈಗಾರಿಕೆಗಳ ಸಂಘದ ಅಧ್ಯಕ್ಷ ಶಿವಶಂಕರ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯ ವಸಚಿತನರಸಾಪುರದ ಸುಮಾರು 25 ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್ ಕೈಗಾರಿಕಾ ವಸಾಹತು ಸ್ಥಾಪನೆಯಾಗುತ್ತಿದ್ದು, ಈಗಾಗಲೇ 400ಕ್ಕೂ ಹೆಚ್ಚು ಕಂಪೆನಿಗಳು ಉತ್ಪಾದನೆ ಪ್ರಾರಂಭಿಸಿದೆ. ಇನ್ನೂ 350 ಕಂಪೆನಿಗಳು ಬರಲಿವೆ. ಇಲ್ಲಿ ಉದ್ದಿಮೆ ಆರಂಭಿಸುವವರಿಗೆ ಬೇಕಾದ ಎಲ್ಲಾ ರೀತಿಯ ಮೂಲಸೌಕರ್ಯವನ್ನು ಜಿಲ್ಲಾಡಳಿತ ಕಲ್ಪಿಸಿ ಕೊಟ್ಟಿದೆ ಎಂದ ಅವರು, ಕುಪ್ಪೂರು ಕೆರೆಯಿಂದ ನೀರು, 45 ಮೀಟರ್ ಅಗಲದ ರಸ್ತೆಗಳು, ನಿರಂತರ ವಿದ್ಯುತ್ ದೊರೆಯುತ್ತಿದೆ.ನಿಧಾನವಾಗಿ ಒಂದೊಂದೆ ಕಂಪನಿಗಳು ಕಾಲಿಡಲಿವೆ. ಈಗಾಗಲೇ ಜಪಾನ್ ಟೌನ್‍ಶಿಫ್ ಸಹ ಶಿರಾ ಬಳಿ ಕೆಲಸ ಪ್ರಾರಂಭಿಸಿದೆ. ಹಾಗಾಗಿ ಉದ್ದಿಮೆದಾರರು ವಸಂತನರಸಾಪುರದಲ್ಲಿ ತಮ್ಮ ಉದ್ದಿಮೆ ತೆರೆಯಬಹುದು ಎಂದು ಮಾಹಿತಿ ನೀಡಿದರು.
ನ.9 ರಂದು ನಡೆಯುವ ಕಾರ್ಯಕ್ರಮವನ್ನು ಸಚಿವ ಟಿ.ಬಿ. ಜಯಚಂದ್ರ ಉದ್ಘಾಟಿಸಲಿದ್ದು, ಶಾಸಕ ಡಾ. ರಫೀಕ್ ಅಹ್ಮದ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಮೇಯರ್ ಎಚ್.ರವಿಕುಮಾರ್, ಸಂಸದರಾದ ಎಸ್.ಪಿ. ಮುದ್ದಹನುಮೇಗೌಡ, ಡಿ.ಕೆ. ಸುರೇಶ್ ಸೇರಿದಂತೆ ಇತರೆ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಡಿಐಸಿಯ ಜಂಟಿ ನಿರ್ದೇಶಕ ನಾಗರಾಜು ಹಾಗೂ ಕರ್ನಾಟಕ ಸಣ್ಣ ಕೈಗಾರಿಕಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.