ಜಾತಿ ವ್ಯವಸ್ಥೆ ಹೋಗಲಾಡಿಸುವುದು ಕನಕದಾಸರ ಚಿಂತನೆಯಾಗಿತ್ತು: ವರ್ತೂರ್ ಪ್ರಕಾಶ್
ಕೋಲಾರ, ನ.6: ಕನಕದಾಸರ ಮಹಾನ್ ಚಿಂತನೆ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸುವುದು ಹಾಗೂ ಸಮಾಜದಲ್ಲಿ ಸಮಾನತೆಯನ್ನು ತರುವುದೇ ಆಗಿತ್ತು ಎಂದು ಕೋಲಾರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಮಾಜಿ ಸಚಿವ ಆರ್.ವರ್ತೂರ್ ಪ್ರಕಾಶ್ ತಿಳಿಸಿದ್ದಾರೆ.
ಇಂದು ನಗರದ ಕನಕ ಮಂದಿರದ ಬಳಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕುರುಬರ ಸಂಘ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕನಕದಾಸರ ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಸವಣ್ಣನವರು ಹನ್ನೆರಡನೇ ಶತಮಾನದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಜಗಜ್ಯೋತಿಯಾದರು. ಅದೇ ರೀತಿ ಕನಕದಾಸರು ಹದಿನೈದನೇ ಶತಮಾನದಲ್ಲಿ ಬಸವಣ್ಣನವರ ಚಿಂತನೆಗಳನ್ನು ಮುಂದುವರೆಸಿದ ಮಹಾನ್ ವ್ಯಕ್ತಿ. ನಂತರ ಇದೇ ಹಾದಿಯಲ್ಲಿ ಸಾಗಿದ ಮತ್ತೊಬ್ಬ ಮಹಾನ್ ಪುರುಷ ಎಂದರೆ ಸಂವಿಧಾನ ರಚನೆಕಾರರಾದ ಡಾ.ಬಿ.ಆರ್.ಅಂಬೇಡ್ಕರ್ ಎಂದು ಅಭಿಪ್ರಾಯಪಟ್ಟರು.
ಹತ್ತು ವರ್ಷಗಳ ನಂತರ ಜಿಲ್ಲೆಗೆ ಉತ್ತಮ ಮಳೆಯಾಗಿದೆ. ಇದರಿಂದ ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿದ್ದು, ಕೋಲಾರಮ್ಮನ ಕೆರೆ ಹಾಗೂ ಅಮ್ಮೇರಹಳ್ಳಿ ಕೆರೆಯಿಂದ 50 ಲಕ್ಷ ರೂ ವೆಚ್ಚದಲ್ಲಿ ನಗರದ ಎಲ್ಲಾ ವಾರ್ಡ್‍ಗಳಿಗೂ ಕುಡಿಯುವ ನೀರಿನ ಸೌಲಭ್ಯವನ್ನು ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕೋಲಾರ ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಮಾತನಾಡಿ, ಸಾಮಾನ್ಯ ಬಡ ಕುಟುಂಬದಲ್ಲಿ ಜನಿಸಿದ ಕನಕದಾಸರು ದೇವರ ಅನುಗ್ರಹ ಪಡೆದು ಮನುಕುಲದ ಆರಾಧ್ಯ ದೇವರಾದರು. ಕನಕದಾಸರ ಜೀವನ ಆದರ್ಶಗಳು ಹಾಗೂ ಚಿಂತನೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಮಾನತೆ ತರುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೋಲಾರ ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಪ್ರಸಾದ್‍ಬಾಬು, ತಾಲೂಕು ಪಂಚಾಯತ್ ಅಧ್ಯಕ್ಷ ಸೂಲೂರು ಎಂ.ಆಂಜಿನಪ್ಪ, ಜಿಲ್ಲಾ ಪಂಚಾಯತ್ ಸದಸ್ಯರಾದ ಸಿ.ಆರ್.ವೆಂಕಟೇಶ್, ಅರುಣ್ ಪ್ರಸಾದ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್ ಸಪೆಟ್, ಅಪರ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ, ಉಪವಿಭಾಗಾಧಿಕಾರಿ ಶುಭಾ ಕಲ್ಯಾಣ್ ಸೇರಿದಂತೆ ವಿವಿಧ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.