×
Ad

ನ.9 ರಿಂದ 'ಕಾರ್ಮಿಕರ ಮಹಾನಡೆ-ದೆಹಲಿಯ ಕಡೆ'

Update: 2017-11-06 22:37 IST

ತುಮಕೂರು, ನ.6: ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ, ಕನಿಷ್ಠ ವೇತನ ಜಾರಿ, ಸಾಮಾಜಿಕ ಸೇವಾ ಭದ್ರತೆ ಸೇರಿದಂತೆ 12 ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ನವೆಂಬರ್ 9 ರಿಂದ 11ರವರೆಗೆ ರಾಷ್ಟ್ರದ 9 ಕಾರ್ಮಿಕ ಸಂಘಟನೆಗಳು ಸಂಯುಕ್ತಾಶ್ರಯದಲ್ಲಿ “ಕಾರ್ಮಿಕರ ಮಹಾನಡೆ-ದೆಹಲಿಯ ಕಡೆ” ಎಂಬ ಮಹಾಧರಣ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾಸಮಿತಿಯ ಸೈಯದ್ ಮುಜೀಬ್ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಣಕ್ಕೆ ತರುವುದಾಗಿ ಹೇಳಿದ್ದ ಮೋದಿಯವರು,1000 ದಿನ ಕಳೆದರೂ ಆಹಾರ ಧಾನ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೆ ತರುವಲ್ಲಿ ವಿಫಲರಾಗಿದ್ದಾರೆ. ಬೆಳೆ ಬೆಲೆ ಶೇ.75ರಷ್ಟು ಹೆಚ್ಚಾಗಿದೆ. ಎಲ್ ಪಿಜಿ ಬೆಲೆ 414 ರೂ ನಿಂದ 800 ತಲುಪಿದೆ. ಸೀಮೆ ಎಣ್ಣೆ ಬೆಲೆ 14 ರೂ.ಗಳಿಂದ 18 ರೂ.ಗಳಿಗೆ ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ನಿರಂತರವಾಗಿ ಕಚ್ಚಾ ತೈಲದ ಬೆಲೆ ಕಡಿಮೆಯಾದರೂ ಇಂಧನ ಬೆಲೆ ಮಾತ್ರ ಹೆಚ್ಚುತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಬಲಪಡಿಸಬೇಕೆಂಬುದು ನಮ್ಮ ಬೇಡಿಕೆಯಾಗಿದೆ ಎಂದರು.

ಕೇಂದ್ರದಲ್ಲಿ ಎನ್ ಡಿಎ ಸರಕಾರ ಅಧಿಕಾರಕ್ಕೆ ಬಂದ ನಂತರ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರುವ ಕೆಲಸ ನಡೆಯುತ್ತಿದ್ದು, ಕಾರ್ಮಿಕರ ಪರವಾಗಿದ್ದ 57 ವಿವಿಧ ಆಯೋಗಗಳನ್ನು ರದ್ದು ಪಡಿಸಿ 4 ಸಂಹಿತೆಗಳಾಗಿ ಜಾರಿಗೆ ತರಲು ಹೊರಟಿದೆ. ಆ ಮೂಲಕ ಕಾರ್ಮಿಕರ ಶ್ರಮದಿಂದ ಸಂಗ್ರಹವಾಗಿದ್ದ ಸುಮಾರು 20 ಲಕ್ಷ ಕೋಟಿ ಹಣವನ್ನು ಶೇರು ಪೇಟೆಯಲ್ಲಿ ಹೂಡಿಕೆ ಮಾಡಿ  ನುಂಗಿ ನೀರು ಕುಡಿಯಲು ಹೊರಟಿದೆ. ಕೇಂದ್ರ ಸರಕಾರ ಕೂಡಲೇ ಇದರಿಂದ ಹಿಂದೆ ಸರಿಯಬೇಕು. ಹಾಗೆಯೇ ವಿವಿಧ ಕಾರ್ಖಾನೆ, ಕಂಪನಿಗಳಲ್ಲಿ ಸಿ.98 ಮತ್ತು ಸಿ.87ಅಡಿಯಲ್ಲಿ ಕಾರ್ಮಿಕರ ಸಂಘಗಳನ್ನು ಕಟ್ಟಲು ನೀಡಿದ್ದ ಅವಕಾಶಗಳನ್ನು ಸಮರ್ಪಕವಾಗಿ ಜಾರಿಗೆ ತರದೆ, ಮಾಲೀಕರ ಪರವಾಗಿ ಸಂಘಟನೆಗಳಿಗೆ ಹೆಚ್ಚು ಒತ್ತು ನೀಡುತ್ತಾ, ಕಾರ್ಮಿಕರನ್ನು ಬಲಿಪಶು ಮಾಡಲು ಹೊರಟಿದ್ದಾರೆ. ಕೇಂದ್ರ ಸರಕಾರ ಮಾಲೀಕರ ಎಜೆಂಟ್‍ರಂತೆ ಕೆಲಸ ಮಾಡುತ್ತಿದ್ದು, ಇದರ ವಿರುದ್ಧ ಕಾರ್ಮಿಕರೆಲ್ಲರೂ ಹೋರಾಟಕ್ಕೆ ಸಿದ್ಧ ರಾಗಿದ್ದಾರೆ ಎಂದು ಸೈಯದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಸದಸ್ಯರಾದ ಎಐಟಿಯುಸಿ ಗಿರೀಶ್, ಕಂಬೇಗೌಡ, ಎಐಎಯುಟಿಯುಸಿಯ ನರಸಿಂಹರಾಜು, ಸಿಐಟಿಯುನ ಎನ್.ಕೆ.ಸುಬ್ರಮಣ್ಯ, ಕಟ್ಟಡ ಕಾರ್ಮಿಕ ಸಂಘಟನೆಯ ಬಿ.ಉಮೇಶ್ ಮತ್ತಿತತರು ಪಾಲ್ಗೊಂಡಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News