ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಬೆಂಕಿ: ತಪ್ಪಿದ ಭಾರೀ ಅನಾಹುತ
Update: 2017-11-07 20:06 IST
ಮೈಸೂರು, ನ.7: ಶಾಲೆಯಿಂದ ಪುಟಾಣಿಗಳು ಕಾರಿನಲ್ಲಿ ಮನೆಗೆ ಹೋಗುವಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದ್ದು, ಸಾರ್ವಜನಿಕರ ಹಾಗೂ ಚಾಲಕನ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ.
ಕುವೆಂಪುನಗರದ ಖಾಸಗಿ ಶಾಲೆಯ ಮಕ್ಕಳು ತರಗತಿ ಮುಗಿಸಿಕೊಂಡು ವಾಪಸ್ ಮನೆಗೆ ಹೋಗುತ್ತಿದ್ದಾಗ ಮಾರುತಿ ಓಮ್ನಿ ವ್ಯಾನ್ ವಿಜಯಾ ಬ್ಯಾಂಕ್ ಸರ್ಕಲ್ ಬಳಿ ಬರುತ್ತಿದ್ದಂತೆಯೇ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ರಸ್ತೆಯಲ್ಲಿ ನಿಂತಿದ್ದವರು ಕೂಗಿಕೊಂಡಿದ್ದಾರೆ. ಇದರಿಂದ ಜಾಗೃತರಾದ ವ್ಯಾನ್ ಚಾಲಕ ಮಕ್ಕಳನ್ನೆಲ್ಲ ಕೆಳಗಿಳಿಸಿ ಜೋಪಾನವಾಗಿ ಸುರಕ್ಷಿತಾ ಸ್ಥಳಕ್ಕೆ ಕಳುಹಿಸಿದ್ದಾರೆ.
ಕೂಡಲೇ ಸರಸ್ವತಿಪುರಂ ಠಾಣೆಯ ಅಗ್ನಿಶಾಮಕ ಸಿಬ್ಬಂದಿಗಳಿಗೆ ಮಾಹಿತಿ ರವಾನಿಸಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿ ಆರಿಸಿದ್ದರಾದರೂ ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ. ಸಾರ್ವಜನಿಕರ ಹಾಗೂ ಚಾಲಕನ ಸಮಯ ಪ್ರಜ್ಞೆಯಿಂದ ಪುಟಾಣಿಗಳಿಗೆ ಯಾವುದೇ ಅಪಾಯ ಸಂಭವಿಸಿಲ್ಲ.