ಮಂಡ್ಯ: ಕೇಂದ್ರ ಸರಕಾರದ ವಿರುದ್ಧ ಕಿಸಾನ್ ಕಾಂಗ್ರೆಸ್ ಪ್ರತಿಭಟನೆ
ಮಂಡ್ಯ, ನ.7: ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ರೈತರನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿ ಹಾಗೂ ಇತರ ಬೇಡಿಕೆಗಳ ಈಡೇರಿಕಗೆ ಒತ್ತಾಯಿಸಿ ಜಿಲ್ಲಾ ರೈತ ಮತ್ತು ಕೃಷಿ ಕಾರ್ಮಿಕ ಕಾಂಗ್ರೆಸ್ ಕಾರ್ಯಕರ್ತರು ನಗರದ ಅಂಚೆ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಪ್ರತಿಭಟನಕಾರರು ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ರೈತರ ಹಣವನ್ನು ಉದ್ಯಮಿಗಳಿಗೆ ನೀಡುತ್ತಿದ್ದಾರೆ. ಪ್ರಧಾನಿಗೆ ಹತ್ತಿರವಾದ ಗೌತಮ್ ಅದಾನಿಗೆ ಸೇರಿದ ಯೂನಿವರ್ಸಲ್ ಸೋಂಪೋ ಕಂಪೆನಿ ರೈತರಿಂದ ಸುಮಾರು 10 ಸಾವಿರ ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಿದರು.
ರಾಜ್ಯದ ರೈತರಿಂದ 15,891 ಕೋಟಿ ರೂ. ಬೆಳೆ ವಿಮೆ ಸಂಗ್ರಹಿಸಿದ್ದು, ಇದರಲ್ಲಿ ರೈತರಿಗೆ ವಿತರಣೆಯಾದ ಮೊತ್ತ ಕೇವಲ 5,962 ಕೋಟಿ ರೂ. ಮಾತ್ರವೆಂದು ಸಿಎಜಿ ವರದಿ ಬಹಿರಂಗಪಡಿಸಿದೆ. ಸುಮಾರು 10 ಸಾವಿರ ಕೋಟಿ ಹಣವನ್ನು ಬೆಳೆ ವಿಮೆ ಹೆಸರಿನಲ್ಲಿ ಲೂಟಿ ಮಾಡಿದ ಹೆಗ್ಗಳಿಕೆ ಕೇಂದ್ರ ಸರಕಾರದ್ದು ಎಂದು ದೂರಿದರು.
ಕೇವಲ 50 ಸಾವಿರ ರೂ.ಗಳಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಪುತ್ರ ಜೈಶಾ ಒಡೆತನದ ಕಂಪೆನಿಯ ಮೊತ್ತ ಏಕಾಏಕಿ 8 ಕೋಟಿ ರೂ.ಗೇರಿದೆ. ರೈತರ ರಾಷ್ಟ್ರಿಕೃತ ಬ್ಯಾಂಕಿನ ಸಾಲ ಮನ್ನಾ ಮಾಡದ ಕೇಂದ್ರ ಸರಕಾರ ಕೆಲವೇ ಕೆಲವು ಉದ್ಯಮಿಗಳಿಗೆ 1.12 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ರೈತರ 22 ಬೆಳೆಗಳಿಗೆ ಬೆಂಬಲ ಬೆಲೆಗಳನ್ನು ಕಡಿತಗೊಳಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರ ಕೂಡಲೇ ರೈತರ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಮಾಡಬೇಕು. ಫಸಲ್‍ಭೀಮಾ ಯೋಜನೆಯಡಿ ರೈತರ ಹಣ ಸುಲಿಗೆ ನಿಲ್ಲಿಸಿ ಈಗಾಗಲೇ ವಸೂಲಿ ಮಾಡಿರುವ 10 ಸಾವಿರ ಕೋಟಿ ರೂ.ಗಳನ್ನು ರೈತರ ಸಾಲಮನ್ನಾಗೆ ವಿನಿಯೋಗಿಸಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು. ಕಬ್ಬು ಮತ್ತು ಕಬ್ಬಿನ ಉತ್ಪನ್ನಗಳನ್ನು ಅಬ್ಕಾರಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಬೇಕುಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮಂಡ್ಯ ಜಿಲ್ಲಾ ರೈತ ಮತ್ತು ಕೃಷಿ ಕಾರ್ಮಿಕ ಕಾಂಗ್ರೆಸ್ ಅಧ್ಯಕ್ಷ ದೇಶಹಳ್ಳಿ ಆರ್. ಮೋಹನ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಆತ್ಮಾನಂದ, ಉಪಾಧ್ಯಕ್ಷ ಕೆ. ಕುಬೇರ, ಚಿಕ್ಕರಾಜೇಗೌಡ, ಎಂ.ಸಿ. ರವಿ, ಸಿ.ಆರ್. ರಮೇಶ್, ಕೆ.ಟಿ. ಗಿರೀಶ್‍ಬಾಬು, ರಾಘವೇಂದ್ರ, ಗಣೇಶ್ ಇತರರಿದ್ದರು.