×
Ad

ನೋಟ್ ಬ್ಯಾನ್: ಕಾಂಗ್ರೆಸ್‍ನಿಂದ ಕರಾಳ ದಿನಾಚರಣೆ

Update: 2017-11-08 22:43 IST

ಮಂಡ್ಯ, ನ.8: ಗರಿಷ್ಠ ಮುಖಬೆಲೆ ನೋಟು ಅಮಾನ್ಯೀಕರಣಕ್ಕೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಜಿಲ್ಲೆಯಾದ್ಯಂತ ಕರಾಳ ದಿನ ಆಚರಿಸಿ, ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಜಿಲ್ಲಾ, ನಗರ ಬ್ಲಾಕ್, ಯುವ, ಮಹಿಳಾ ಮತ್ತು ಇತರೆ ವಿಭಾಗಗಳ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ ಕೇಂದ್ರ ಸರಕಾರದ ಕ್ರಮದ ವಿರುದ್ಧ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ನೋಟು ಅಮಾನ್ಯೀಕರಣ ಕ್ರಮ ಸಮರ್ಥಿಸಿಕೊಳ್ಳುತ್ತಿರುವ ಪ್ರಧಾನಿ ಮೋದಿ ಮತ್ತು ಬಿಜೆಪಿ ಮುಖಂಡರ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು, ದೇಶದ ಆರ್ಥಿಕ ವ್ಯವಸ್ಥೆಗೆ ಕುಸಿತಕ್ಕೆ ಬಿಜೆಪಿ ಕಾರಣವಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಮಾತನಾಡಿ, ಪೂರ್ವ ತಯಾರಿಯಿಲ್ಲದೆ, ಪ್ರಧಾನಿ ಮೋದಿ ವರ್ಷದ ಹಿಂದೆ 500, 1000 ಮುಖಬೆಲೆ ನೋಟು ಅಮಾನ್ಯೀಕರಣಗೊಳಿಸಿ ದೇಶವನ್ನ ಸಂಕಷ್ಟಕ್ಕೆ ದೂಡಿದರು ಎಂದು ದೂರಿದರು.

ಚಲಾವಣೆಯಲ್ಲಿದ್ದ ಶೇ.86ರಷ್ಟು ನೋಟುಗಳನ್ನು ದಿಢೀರ್ ರದ್ದುಪಡಿಸಿದ ಕಾರಣ ದೇಶದ ಸಾಮಾನ್ಯ ಜನ ತತ್ತರಿಸಿ ಹೋದರು. ಮೂರು ತಿಂಗಳು ಹಣ ಬದಲಾವಣೆಗೆ ಜನರು ಪಟ್ಟ ಬವಣೆ ಹೇಳತೀರದು ಎಂದು ಅವರು ಕಿಡಿಕಾರಿದರು.

ಕೇಂದ್ರ ಸರಕಾರ ಹೇಳಿಕೊಂಡಂತೆ ನೋಟು ಅಮಾನ್ಯೀಕರಣದಿಂದ ಭಯೋತ್ಪಾದನೆ ನಿಂತಿಲ್ಲ, ಖೋಟಾ ನೋಟು ನಿಯಂತ್ರಣವಾಗಿಲ್ಲ. ಹೊಸ ನೋಟು ಹೊರಬಂದ ಕೆಲವೇ ದಿನಗಳಲ್ಲಿ ನಕಲಿ ನೋಟುಗಳು ಚಲಾವಣೆಗೆ ಬಂದವು. ಇನ್ನು ಕಪ್ಪುಹಣ ಹೊರಬರಲೇ ಇಲ್ಲ ಎಂದು ವಿವರಿಸಿದರು.

ಮೋದಿ ಸರಕಾರದ ಯೋಜಿತವಲ್ಲದ ನೋಟು ನಿಷೇದ ಕ್ರಮದಿಂದ ದೇಶದ ಆರ್ಥಿಕ ಅಭಿವೃದ್ಧಿಯ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಿ ಜಾಗತಿಕವಾಗಿ ದೇಶ ಟೀಕೆಗೊಳಗಾಯಿತು. ದೇಶದ ಜಿಡಿಪಿ ಎರಡರಷ್ಟು ಕುಸಿತ ಕಂಡು ಚೇತರಿಸಿಕೊಳ್ಳಲು ತಿಣುಕಾಡಬೇಕಾಗಿದೆ ಎಂದು ಅವರು ಹೇಳಿದರು.

ನೋಟು ಅಮಾನ್ಯೀಕರಣಗೊಂಡ ಒಂದು ವರ್ಷವಾದರೂ ಅದರ ದುಷ್ಪರಿಣಾಮ ಇನ್ನೂ ನಿಂತಿಲ್ಲ. ಕೇಂದ್ರ ಸರಕಾರ ಇದಕ್ಕೆ ಕಾರಣ ನೀಡಬೇಕು. ಸಾವನ್ನಪ್ಪಿದ ಅಮಾಯಕರ ಕುಟುಂಬಗಳಿಗೆ ಸೂಕ್ತ ಪರಿಹಾರ ಕೊಡಿಸಬೇಕು ಎಂದು ರಾಷ್ಟ್ರಪತಿ ರಮಾನಾಥ್ ಕೋವಿಂದ ಅವರನ್ನು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಅಚಿಜನಾ ಶ್ರೀಕಾಂತ್, ಯುವ ಘಟಕದ ಅಧ್ಯಕ್ಷ ಲೋಕೇಶ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಬೀವುಲ್ಲಾ, ಮುಡಾ ಅಧ್ಯಕ್ಷ ಮುನಾವರ್ ಖಾನ್, ವಿಜಯಲಕ್ಷ್ಮಿ ರಘುನಂದನ್, ಶುಭದಾಯಿನಿ, ಎಂ.ಎಸ್.ಚಿದಂಬರ್, ಹೊಸಹಳ್ಳಿ ಬೋರೇಗೌಡ, ಹನ್ಸಿಯಾಭಾನು, ಇತರ ಮುಖಂಡರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News