ಹನೂರು: ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರ ಉನ್ನತೀಕರಿಸುವಂತೆ ಆಗ್ರಹಿಸಿ ಧರಣಿ
ಹನೂರು, ನ.8: ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉನ್ನತೀಕರಿಸುವಂತೆ ಮತ್ತು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಹಾಗೂ ಸ್ತ್ರೀಶಕ್ತಿ ಸಂಘಟನೆಗಳು ಮತ್ತು ವಿವಿಧ ಸಂಘ ಸಂಸ್ಥೆಗಳು ಧರಣಿ ನಡೆಸಿದವು.
ಬುಧವಾರ ಬೆಳಗ್ಗೆ ಮಹದೇಶ್ವರ ಬೆಟ್ಟ ಸುತ್ತಮುತ್ತಲ 18 ಗ್ರಾಮಗಳ ಗ್ರಾಮಸ್ಥರು, ವಿವಿಧ ಸಂಘ ಸಂಸ್ಥೆ ಹಾಗೂ ಸ್ತ್ರೀಶಕ್ತಿ ಸಂಘ ಸಂಸ್ಥೆಗಳ ಕಾರ್ಯಕರ್ತರು ದೇವಾಲಯದ ಆವರಣದಲ್ಲಿ ಜಮಾಯಿಸಿ ಮಹದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಸಾಲೂರು ಬೃಹನ್ಮಠದ ರಸ್ತೆ, ಎಸ್.ಬಿ.ಎಂ ಬ್ಯಾಂಕ್ ವೃತ್ತ ಮಾರ್ಗವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂಭಾಗ ಜಮಾವಣೆಗೊಂಡರು.
ಈ ವೇಳೆ ಮಾತನಾಡಿದ ಧರಣಿನಿರತರರು, ರಾಜ್ಯ ಮತ್ತು ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು, ಜಾತ್ರಾ ಇನ್ನಿತರ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತಾದಿಗಳು ಆಗಮಿಸುತ್ತಾರೆ. ಅಲ್ಲದೆ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿಯ ರಸ್ತೆ ರಹಿತ ಕಾಲ್ನಡಿಗೆಯ 21 ಗ್ರಾಮಗಳು ಒಳಪಡಲಿದ್ದು, 18ಸಾವಿರ ಜನಸಂಖ್ಯೆ ಹೊಂದಿದೆ. 1,500 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಹೇಳಿದರು.
ಕಾಡಂಚಿನ ಗ್ರಾಮವಾಸಿಗಳ ಆರೋಗ್ಯ ಕೇಂದ್ರದಲ್ಲಿ ವ್ಯತ್ಯಾಸ ಕಂಡುಬಂದರೆ ಅಥವಾ ಗರ್ಭಿಣಿಯರ ಚಿಕಿತ್ಸೆಗೆ ನ್ಯಾನೆ ಕಟ್ಟಿಕೊಂಡು ಗುಟ್ಟಗಾಡು ಪ್ರದೇಶದಲ್ಲಿ ಹತ್ತಾರು ಕಿಲೋ ಮೀಟರ್ ಕಾಲ್ನಡಿಗೆಯಲ್ಲಿಯೇ ಬರಬೇಕಾದ ಪರಿಸ್ಥಿತಿಯಿದೆ. ಹೇಗೋ ಪ್ರಾಥಮಿಕ ಆರೋಗ್ಯ ಕೇಂದ್ರ ತಲುಪಿದರೆ ಇಲ್ಲಿ ಸಮರ್ಪಕ ಆರೋಗ್ಯ ಸೇವೆ ದೊರಕದೆ ಚಿಕಿತ್ಸೆಗಾಗಿ ಕೊಳ್ಳೇಗಾಲ ಅಥವಾ ನೆರೆಯ ರಾಜ್ಯ ತಮಿಳುನಾಡಿನ ಖಾಸಗಿ ಆಸ್ಪತ್ರೆಗಳಿಗೆ 80 -100 ಕಿ.ಮೀ ಸಂಚರಿಸಬೇಕಿದೆ. ಈ ರೀತಿ ಪ್ರಯಾಣಿಸುವ ವೇಳೆ ಹಲವಾರು ಜನ ಮೃತಪಟ್ಟಿದ್ದು ಬಡಜನರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿ ಸುದ್ದಿ ತಿಳಿದ ತಾಲೂಕು ವೈದ್ಯಾಧಿಕಾರಿ ಗೋಪಾಲ್ ಅವರು ಸ್ಥಳಕ್ಕಾಗಮಿಸಿ ಧರಣಿನಿರತರ ಮನವೊಲಿಸಲು ಪ್ರಯತ್ನಿಸಿದರು. ಈ ವೇಳೆ ಧರಣಿನಿರತರರು ಮ.ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೂಡಲೇ 30 ಹಾಸಿಗೆಗಳುಳ್ಳ ಆಸ್ಪತ್ರೆಯಾಗಿ ಉನ್ನತೀಕರಿಸಬೇಕು, ನಿರಂತರ ವೈದ್ಯರು ಲಭ್ಯವಿರುವಂತೆ ಇಬ್ಬರು ವೈದ್ಯರನ್ನು ನೇಮಿಸಬೇಕು, ಗರ್ಭಿಣಿಯರು ಮತ್ತು ಸ್ತ್ರೀ ಸಂಬಮಧಿತ ಕಾಯಿಲೆಗಳ ಚಿಕಿತ್ಸೆಗಾಗಿ ಓರ್ವ ಮಹಿಳಾ ವೈದ್ಯಾಧಿಕಾರಿಯನ್ನು ನೇಮಿಸಬೇಕು. ಎಕ್ಸ್-ರೇ, ಸ್ಕ್ಯಾನಿಂಗ್ ಯಂತ್ರಗಳ ಸೌಲಭ್ಯ, ಶಸ್ತ್ರಚಿಕಿತ್ಸಾ ಸೌಲಭ್ಯ, ಲ್ಯಾಬ್ ಸೇವೆಗಳನ್ನು ಒಸಗಿಸಬೇಕು ಎಂದು ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಗೋಪಾಲ್ ತಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವ ಸಂಬಂಧ ಜಿಲ್ಲಾ ವೈದ್ಯಾಧಿಕಾರಿಗಳ ಜೊತೆ ಇಂದೇ ಚರ್ಚಿಸಿ ಮುಂದಿನ ಒಂದು ತಿಂಗಳೊಳಗಾಗಿ ಬೇಡಿಕೆಗಳ ಈಡೇರಿಕೆಗೆ ಕ್ರಮವಹಿಸಲಾಗುವುದು ಎಂದು ಲಿಖಿತವಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಧರಣಿನಿಯಲ್ಲಿ ಬೇಡಗಂಪಣ ಮಹಿಳಾ ಸ್ವಸಹಾಯ ಸಂಘ, ಸಾಧನಾ ಮಹಿಳಾ ಸ್ವ ಸಹಾಯ ಸಮಘ, ಸರಸ್ವತಿ ಮಹಿಲಾ ಸ್ವ ಸಹಾಯ ಸಂಘ, ಆದಿ ಮಾದೇಶ್ವರ ಸಂಘ ಮತ್ತು ವಿವೇಕಾನಂದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸದಸ್ಯರು ಭಆಗವಹಿಸಿದ್ದರು.