×
Ad

ಬಸವನಹಳ್ಳಿ, ಬ್ಯಾಡಗೊಟ್ಟದಲ್ಲಿ ಪುನರ್ವಸತಿ ಪಡೆದ ಬಡಜನರು ಅತಂತ್ರ ಸ್ಥಿತಿಯಲ್ಲಿದ್ದಾರೆ: ನಿರ್ವಾಣಪ್ಪ

Update: 2017-11-08 23:11 IST

ಮಡಿಕೇರಿ, ನ.8: ದಿಡ್ಡಳ್ಳಿಯಲ್ಲಿ ಆಶ್ರಯ ಕಳೆದುಕೊಂಡು ಸರಕಾರದ ಅನುಕಂಪದ ಮೇಲೆ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟದಲ್ಲಿ ಪುನರ್ವಸತಿ ಪಡೆದ ಬಡಜನರು ಸರಕಾರದ ನಿರ್ಲಕ್ಷ್ಯದಿಂದಾಗಿ ಇಂದು ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪಿಸಿರುವ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ, ನ.12ರಂದು ಜಿಲ್ಲಾಡಳಿತದ ಶವ ಯಾತ್ರೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸಂಚಾಲಕ, ಡಿ.ಎಸ್. ನಿರ್ವಾಣಪ್ಪ, ಪುನರ್ವಸತಿ ಪ್ರದೇಶದಲ್ಲಿ ನಿರಾಶ್ರಿತರಿಗೆ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದ್ದ ಸರಕಾರ ಇದೀಗ ನಿರ್ಮಾಣ ಹಂತದ ಮನೆಗಳನ್ನು ಪೂರ್ಣ ಗೊಳಿಸಲು ಅನುದಾನವನ್ನೆ ಬಿಡುಗಡೆ ಮಾಡಿಲ್ಲವೆಂದು ಆರೋಪಿಸಿದರು.

ಮನೆಗಳ ನಿರ್ಮಾಣದ ವೆಚ್ಚವನ್ನು ಕೂಡ ಕಡಿತಗೊಳಿಸಿದ್ದು, 3.30 ಲಕ್ಷ ರೂ.ಗಳಿಗೆ ಸೀಮಿತಗೊಳಿಸಿ ಇದರಲ್ಲಿ 20 ಸಾವಿರ ರೂ.ಗಳಷ್ಟು ಜಿಎಸ್‌ಟಿಗೆ ಕಡಿತವಾಗಲಿದೆಯೆಂದು ಹೇಳಲಾಗುತ್ತಿದೆ. ಅಲ್ಲದೆ, ಅನುದಾನದ ಕೊರತೆಯಿಂದಾಗಿ ಗುತ್ತಿಗೆದಾರರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಆರು ತಿಂಗಳು ಮಾತ್ರ ಪೌಷ್ಠಿಕ ಆಹಾರವನ್ನು ನೀಡುವುದಾಗಿ ಸರಕಾರ ತಿಳಿಸಿದ್ದು, ಈ ಅವಧಿ ಡಿಸೆಂಬರ್ ತಿಂಗಳಿಗೆ ಪೂರ್ಣ ಗೊಳ್ಳಲಿದೆ. ವಸತಿಯೂ ಸಿಗದೆ, ಮತ್ತೊಂದೆಡೆ ಆಹಾರವು ಇಲ್ಲದೆ ಬಡವರು ಮತ್ತೆ ಜೀತದಾಳುಗಳಾಗಿ ತೋಟಗಳಲ್ಲಿ ದುಡಿಯಬೇಕಾದ ದುಸ್ಥಿತಿ ಬಂದೊದಗಬಹುದೆಂದು ನಿರ್ವಾಣಪ್ಪಆತಂಕ ವ್ಯಕ್ತಪಡಿಸಿದರು.

ಸಮಿತಿಯ ಪ್ರಮುಖರಾದ ಅಮಿನ್ ಮೊಹಿಸಿನ್ ಮಾತನಾಡಿ, ಚೆರಿಯಪರಂಬು ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಇದೇ ಸಂದರ್ಭ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖ ಸಣ್ಣಪ್ಪ, ಅಪ್ಪುಹಾಗೂ ಕೆ. ಶ್ರೀನಿವಾಸ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News