ಟಿಪ್ಪು ಜಯಂತಿ: ಕೊಡಗು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್

Update: 2017-11-09 14:14 GMT

ಮಡಿಕೇರಿ, ನ.9: ಟಿಪ್ಪು ಜಯಂತಿ ಆಚರಣೆಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದ್ದು, ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ. ಇತರೆ ಜಯಂತಿಗಳಂತೆ ಈ ಜಯಂತಿಯೂ ಜರಗಲಿದೆ ಎಂದು ಜಿಲ್ಲಾಡಳಿತ ಜಿಲ್ಲೆಯ ಜನತೆಗೆ ಅಭಯ ನೀಡಿದೆ. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ,  ನವೆಂಬರ್ 10 ರಂದು ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಬಂದೋಬಸ್ತ್ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ಕೇರಳ ರಾಜ್ಯದ ಕಣ್ಣೂರು, ವಯನಾಡ್, ಕಾಸರಗೋಡು ಹಾಗೂ ಹಾಸನ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗೆ ಹೊಂದಿಕೊಂಡಂತಹ 10 ಚೆಕ್‍ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, ಎಲ್ಲಾ ಚೆಕ್‍ ಪೋಸ್ಟ್ ಗಳಲ್ಲಿ ಒಟ್ಟು 40 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಹೊರಜಿಲ್ಲೆ ಹಾಗೂ ಹೊರರಾಜ್ಯದಿಂದ ಬರುವಂತಹ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ ಹಾಗೂ 60 ಆಂತರಿಕ ವಿಶೇಷ ಚೆಕ್‍ ಪೋಸ್ಟ್ ಗಳು ಪೊಲೀಸ್ ಠಾಣಾ ಮಟ್ಟದಲ್ಲಿ ಕಾರ್ಯನಿರ್ವಹಿಸಲಿವೆ ಎಂದು ಮಾಹಿತಿ ನೀಡಿದರು.

ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆಗಳಲ್ಲಿ ಒಟ್ಟು 249 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಎಲ್ಲಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿರಿಸಲಾಗಿದೆ. ಕೊಡಗು ಜಿಲ್ಲೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಯಿಂದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ನೇಮಿಸಲಾಗಿದ್ದು, ಒಬ್ಬರು ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 8 ಡಿವೈಎಸ್ಪಿ, 23 ಪೊಲೀಸ್ ಇನ್ ಸ್ಪೆಕ್ಟರ್, 68 ಸಬ್ ಇನ್ ಸ್ಪೆಕ್ಟರ್, 113 ಎಎಸ್ಸೈ, 1500 ಎಚ್‍ಸಿ/ಪಿಸಿ/ಎಂಎಚ್‍ಸಿ/ಎಂಪಸಿ, 27ಡಿಎಆರ್ ತುಕಡಿಗಳು, 15 ಕೆಎಸ್‍ಆರ್‍ಪಿ ತುಕಡಿಗಳು, ಹಾಗೂ ಕ್ಷಿಪ್ರ ಕಾರ್ಯಾಚರಣೆ ಪಡೆಯ ಒಂದು ಕಂಪೆನಿ ಒಳಗೊಂಡಿದೆ ಎಂದರು.

100 ವಾಹನಗಳನ್ನು ದಿನದ 24 ಗಂಟೆ ಗಸ್ತಿಗೆ ನೇಮಿಸಲಾಗಿದೆ. ಇದಲ್ಲದೆ ಅರಣ್ಯ ಇಲಾಖೆಯ ವತಿಯಿಂದ 14 ರ್ಯಾಪಿಡ್ ರೆಸ್‍ ಪಾನ್ಸ್ ತಂಡವನ್ನು ಹಾಗೂ 75 ಸಿಬ್ಬಂದಿ ಪೊಲೀಸರೊಂದಿಗೆ ಸಹಕರಿಸಲು ನಿಯೋಜಿಸಲಾಗಿದೆ. ಕಂದಾಯ ಇಲಾಖೆಯ ವತಿಯಿಂದ 16 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಯವರನ್ನು ಎಲ್ಲಾ ಹೋಬಳಿ ಕೇಂದ್ರಗಳಿಗೆ ನಿಯೋಜಿಸಲಾಗಿದೆ ಎಂದು ವಿವರಿಸಿದರು. 

ಎಡಿಜಿಪಿ ಭಾಸ್ಕರ್ ರಾವ್ ಮಾರ್ಗದರ್ಶನದಲ್ಲಿ ಎಸ್ಪಿ ರಾಜೇಂದ್ರಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಡಿವೈಎಸ್ಪಿ ಸುಂದರರಾಜ್, ಪೊಲೀಸ್ ವೃತ್ತ ನಿರೀಕ್ಷರಾದ ಐ.ಪಿ.ಮೇದಪ್ಪ, ಮಹೇಶ್ ಹೆಚ್ಚಿನ ಬಂದೋಬಸ್ತ್ ಕೈಗೊಂಡಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News