×
Ad

ಟಿಪ್ಪು ಜಯಂತಿಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು ಶೋಚನೀಯ: ಸುಬ್ಬಾರೆಡ್ಡಿ

Update: 2017-11-10 19:29 IST

ಬಾಗೇಪಲ್ಲಿ, ನ.10: ಭಯದ ವಾತಾವರಣ ಹಾಗೂ ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ದೇಶ ಭಕ್ತ ಟಿಪ್ಪು ಸುಲ್ತಾನ್ ರವರ ಜಯಂತಿಯನ್ನು ಆಚರಣೆ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಸರ್ಕಾರಿ ಬಾಲಕೀಯರ ಶಾಲಾ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 268ನೆ ಹಝರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಟಿಪ್ಪು ಜಯಂತಿಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದು  ಶೋಚನೀಯ ಸಂಗತಿ. ಟಿಪ್ಪು ಮತಾಂಧವಾದಿ, ದೇಶದ್ರೋಹಿ ಎಂದು ಪಟ್ಟಕಟ್ಟುತ್ತಿದ್ದಾರೆ, ಇವರ ಚರಿತ್ರೆ ಅರಿಯದವರು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪದ ಎಂದ ಅವರು, ಒಂದು ವೇಳೆ ಟಿಪ್ಪು ಮತಾಂಧವಾದಿಯಾಗಿದ್ದರೆ ರಾಜ್ಯದ ಬಹುತೇಕ ಕಡೆಗಳಲ್ಲಿ  ಹಿಂದು ದೇವಾಲಯಗಳನ್ನು ಏಕೆ ನಿರ್ಮಾಣಮಾಡುತ್ತಿದ್ದರು ಹಾಗೂ ಇವರ ಆಸ್ಥಾನದಲ್ಲಿ ಹಿಂದುಗಳಿಗೆ ಉನ್ನತ ಪದವಿಗಳಲ್ಲಿ ಏಕೆ ನೇಮಕ ಮಾಡುತ್ತಿದ್ದರು? ಅಲ್ಲದೆ, ಅವರು ದೇಶದ್ರೋಹಿಯಾಗಿದ್ದಿರೆ ತಮ್ಮ ಮಕ್ಕಳನ್ನು ನಾಡಿಗೆ ಒತ್ತೆ ಇಟ್ಟು ಬ್ರಿಟಿಷರ ಜೊತೆ ಏಕೆ ಹೋರಾಟ ಮಾಡುತ್ತಿದ್ದರು ಎಂದು ಪ್ರಶ್ನಿಸಿದರು.

ಟಿಪ್ಪು ಜಯಂತಿಗೆ ಇಷ್ಟೊಂದು ವಿರೋಧವಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ಜಯಂತಿಗಳಂತೆ ಟಿಪ್ಪು ಜಯಂತಿಯನ್ನು ಮಾಡೇತೀರುವುದಾಗಿ ಪಟ್ಟುಹಿಡಿದು ಇಂದು ಇಡೀ ರಾಜ್ಯಾದ್ಯಾಂತ ಅದ್ದೂರಿಯಾಗಿ ಆಚರಣೆಗೆ ಮುಂದಾಗಿದ್ದಾರೆ. ಆದರೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಪೊಲೀಸ್ ಬಂದೋಬಸ್ತ್ ನಲ್ಲಿ ಜಯಂತಿಯನ್ನು ಆಚರಿಸುವಂತಾಗಿದೆ. ದೇಶಭಕ್ತರ ಜಯಂತಿಗಳನ್ನು ಕಾಟಾಚಾರಕ್ಕೆ ಮಾಡದೆ ಇಂತಹ ಮಹನೀಯರ ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳುವಂತೆ ಕರೆ ನೀಡಿದರು.

ಈ ವೇಳೆ ಮಾಜಿ ಪುರಸಭೆಯ ಸದಸ್ಯ ಮೊಹಮ್ಮದ್ ನೂರುಲ್ಲಾ ಟಿಪ್ಪು ಜೀವನ ಚರಿತ್ರೆಯ ಕುರಿತು ಸವಿವರವಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮೊಹಮ್ಮದ್ ಅಸ್ಲಾಂ ಬಾಷಾ, ಬಿಇಒ ವೆಂಟರವಣಪ್ಪ, ಜಿ.ಪಂ ಸದಸ್ಯ ನರಸಿಂಹಪ್ಪ, ತಾ.ಪಂ ಅಧ್ಯಕ್ಷ ನರೇಂದ್ರ ಬಾಬು, ಪುರಸಭೆ ಅಧ್ಯಕ್ಷೆ ಮಮತಾ, ಉಪಾದ್ಯಕ್ಷೆ ಹುಸೈನ್ , ಪುರಸಭೆಯ ಸದಸ್ಯರಾದ ಝಭೀವುಲ್ಲಾ, ಸೈಯದ್ ಖಲೀಮುಲ್ಲಾ, ಇನಾಯಿತ್ತುಲ್ಲಾ, ರಾಧಮ್ಮ,  ಮೊಹಮ್ಮದ್ ಅಕ್ರಂ, ಮುಖಂಡರಾದ ಕನ್ನಡ ಸೇನೆ ಬಾಬಾ ಜಾನ್, ಕರವೇ ಸ್ವಾಭಿಮಾನಿ ಬಣದ ಅಧ್ಯಕ್ಷ ಸೀನಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ.ಹನುಮಂತರೆಡ್ಡಿ, ಕೃಷಿ ಇಲಾಖೆಯ ಸಹಾಯ ನಿದೇರ್ಶಕ ಚಂದ್ರಶೇಖರ್ ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಹಾಜರಿದ್ದರು.


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News