ಕುವೆಂಪು ಕನ್ನಡ ಸಾರಸ್ವತ ಲೋಕಕ್ಕೆ ವೈಚಾರಿಕ ಶಕ್ತಿ ತುಂಬಿದವರು: ಸಾಹಿತಿ ಬನ್ನೂರು ಕೆ.ರಾಜು

Update: 2017-11-10 16:31 GMT

ಮೈಸೂರು, ನ.10: ಜಗತ್ತಿಗೆ ವಿಶ್ವಮಾನವತ್ವ ಸಂದೇಶ ನೀಡಿ, ಮನುಜಮತ ವಿಶ್ವಪಥ ಎಂದು ಸಾರಿ, ವಿಶ್ವಪ್ರಜ್ಞೆ ಮೂಡಿಸಿ ಕನ್ನಡ ಸಾರಸ್ವತ ಲೋಕಕ್ಕೆ ವಿಶೇಷ ವೈಚಾರಿಕ ಶಕ್ತಿ ತುಂಬಿದವರು ರಾಷ್ಟ್ರಕವಿ ಕುವೆಂಪು ಎಂದು ಸಾಹಿತಿ ಬನ್ನೂರು ಕೆ.ರಾಜು ಬಣ್ಣಿಸಿದ್ದಾರೆ.

ಮೈಸೂರು ಕನ್ನಡ ವೇದಿಕೆ ವತಿಯಿಂದ ಕುವೆಂಪು ಅವರ 23ನೆ ಸಂಸ್ಮರಣೆ ಅಂಗವಾಗಿ ಶುಕ್ರವಾರ ನಗರದ ಗನ್‍ ಹೌಸ್‍ನಲ್ಲಿರುವ ಕುವೆಂಪು ಉದ್ಯಾನವನದಲ್ಲಿ ಆಯೋಜಿಸಿದ್ದ ಕುವೆಂಪು ಒಂದು ನೆನಪು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕುವೆಂಪು ಗುಡಿ, ಚರ್ಚು, ಮಸೀದಿಗಳ ಬಿಟ್ಟು ಹೊರ ಬನ್ನಿ, ವೈಜ್ಞಾನಿಕ ದೀವಿಗೆಯ ಹಿಡಿಯ ಬನ್ನಿ ಎಂದು ಯುವ ಜನತೆಗೆ ಕರೆಕೊಟ್ಟು ಮನುಷ್ಯತ್ವದ ಬೆಳಕು ಚೆಲ್ಲಿದವರು. ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಬೇಕಿತ್ತು. ಅಂತಹ ಮಹಾನ್ ಕವಿ ಕುವೆಂಪು. ಗಾಂಧೀಜಿಯವರಿಗೆ ಹೇಗೆ ಶಾಂತಿ ನೊಬೆಲ್ ದೊರೆಯಲಿಲ್ಲವೋ ಹಾಗೆಯೇ ಕುವೆಂಪು ಅವರು ಅರ್ಹತೆ ಇದ್ದರೂ ನೊಬೆಲ್‍ನಿಂದ ವಂಚಿತರಾದರು ಎಂದ ಅವರು, ಕುವೆಂಪು ಕನ್ನಡ ನಾಡಿನಲ್ಲಿ ಹುಟ್ಟಿ, ಕನ್ನಡ ಭಾಷೆಯನ್ನು ವಿಶ್ವದೆತ್ತರಕ್ಕೆ ಮೆರೆಸಿ ಕೀರ್ತಿ ತಂದ ಮಹಾನ್ ಕವಿ ಎಂದರು.

ದಲಿತ ಸಾಹಿತಿ ಡಾ.ಮುನಿವೆಂಕಪಟ್ಟ ಮಾತನಾಡಿ, ಸಿನೆಮಾ ಕ್ಷೇತ್ರದಲ್ಲಿ ಡಾ.ರಾಜ್‍ಕುಮಾರ್ ಹೇಗೋ ಹಾಗೆಯೇ ಕನ್ನಡ ಸಾರಸ್ವತ ಲೋಕದಲ್ಲಿ ರಾಷ್ಟ್ರಕವಿ ಕುವೆಂಪು ಬದುಕಿದ್ದಾಗಲೇ ದಂತಕತೆಯಾದವರು. ಅವರ ಪ್ರತಿಯೊಂದು ಕೃತಿಗಳಲ್ಲೂ ವೈಚಾರಿಕ ಚಿಂತನೆ ಅಡಕವಾಗಿದೆ ಎಂದ ಅವರು, ಕುವೆಂಪು ಅವರ ಸಾಹಿತ್ಯವನ್ನು ಯುವಕರು ಹೆಚ್ಚೆಚ್ಚು ಓದುವ ಮೂಲಕ ಕುವೆಂಪು ಅವರನ್ನು ಸ್ಮರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಇತಿಹಾಸ ತಜ್ಞ ಪ್ರೊ.ನಂಜರಾಜೇ ಅರಸ್, ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ, ನಾಲಾಬೀದಿ ರವಿ,  ಪ್ಯಾಲೇಸ್‍ಬಾಬು, ಸುನೀಲ್, ಪತ್ರಕರ್ತ ಮಹೇಶ್, ಗುರುಬಸಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News