ನಾನೂ ಟಿಕೆಟ್ ಆಕಾಂಕ್ಷಿಯಾದರು ವರಿಷ್ಠರ ತೀರ್ಮಾನಕ್ಕೆ ಬದ್ಧ: ಪ್ರಜ್ವಲ್ ರೇವಣ್ಣ ಸ್ಪಷ್ಟನೆ
ಮಂಡ್ಯ, ನ.10: ಮುಂದಿನ ವಿಧಾನಸಭೆ ಚುನಾವಣೆಗೆ ನಾನು ಕೂಡ ಟಿಕೆಟ್ ಆಕಾಂಕ್ಷಿ. ಆದರೆ, ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಜೆಡಿಎಸ್ ಮುಖಂಡ, ಎಚ್.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಕೆಆರ್ ಪೇಟೆ ತಾಲೂಕಿನ ಅರಳುಕುಪ್ಪೆ ಗ್ರಾಮದ ಪಕ್ಷದ ಯುವ ಕಾರ್ಯಕರ್ತನ ಗೃಹಪ್ರವೇಶ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಿಲ್ಲೆಯ ಯಾವ ಕ್ಷೇತ್ರದಲ್ಲಿ ಟಿಕೆಟ್ ನೀಡಿದರೂ ಚುನಾವಣೆ ಎದುರಿಸುತ್ತೇನೆ.
ಟಿಕೆಟ್ ಕೊಡುವುದು ಅಥವಾ ಬಿಡುವುದು ಪಕ್ಷದ ವರಿಷ್ಠರಿಗೆ ಬಿಟ್ಟದ್ದು. ರಾಜ್ಯದ 224 ಕ್ಷೇತ್ರಗಳಲ್ಲೂ ಆಕಾಂಕ್ಷಿತರಿದ್ದಾರೆ. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನು ಟಿಕೆಟ್ ಆಕಾಂಕ್ಷಿಯಾಗುವುದು ಪ್ರಜಾಪ್ರಭತ್ವದ ತತ್ವ. ಅಂತಿಮವಾಗಿ ಟಿಕೆಟ್ ಕೊಡುವುದು ವರಿಷ್ಠರಿಗೆ ಬಿಟ್ಟಿದ್ದು. ಅವರ ತಿರ್ಮಾನವೇ ಪಕ್ಷದಲ್ಲಿ ಅಂತಿಮ ಎಂದರು.
ನನಗೆ ಟಿಕೆಟ್ ಕೊಡದಿದ್ದರೂ ರಾಜ್ಯಾದ್ಯಂತ ಪಕ್ಷ ಸಂಘಟಿಸಿ ಪಕ್ಷದ ಅಭ್ಯರ್ಥಿಗಳ ಆಯ್ಕೆಗೆ ಶ್ರಮಿಸುವ ಮೂಲಕ ಕುಮಾರಸ್ವಾಮಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ. ಈಗಾಗಲೇ 7 ವರ್ಷದಿಂದ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. ಮುಂದಿನ ದಿನದಲ್ಲೂ ಲಕ್ಷಾಂತರ ಯುವ ಕಾರ್ಯಕರ್ತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.