ಮಂಡ್ಯ: ಜಿಲ್ಲೆಯಲ್ಲಿ ಶಾಂತಿಯುತ ಟಿಪ್ಪು ಜಯಂತಿ ಆಚರಣೆ
ಮಂಡ್ಯ, ನ.10: ಶ್ರೀರಂಗಪಟ್ಟಣದಲ್ಲಿ ಮುಸ್ಲಿಂ ಯುವಕರೊಂದಿಗೆ ಮತ್ತು ಪಾಂಡವಪುರದಲ್ಲಿ ಬಿಜೆಪಿ ಮುಖಂಡರ ಜತೆ ಪೊಲೀಸರ ಮಾತಿನ ಚಕಮಕಿ ಹೊರತುಪಡಿಸಿದರೆ ಜಿಲ್ಲೆಯಾದ್ಯಂತ ಟಿಪ್ಪು ಸುಲ್ತಾನ್ ಜಯಂತಿ ಶಾಂತಿಯುತವಾಗಿ ನೆರವೇರಿತು.
ಮುನ್ನೆಚ್ಚರಿಕೆಯಾಗಿ ನಿಷೇಧಾಜ್ಞೆ ಹೊರಡಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ಮಾತಿಲಾಗಿತ್ತು. ಶ್ರೀರಂಗಪಟ್ಟಣ, ಪಾಂಡವಪುರ ಮತ್ತು ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ವಿಶೇಷವಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.
ಟಿಪ್ಪು ಸುಲ್ತಾನ್ ರಾಜಧಾನಿ ಮತ್ತು ಆತನ ಸಮಾಧಿ ಇರುವ ಶ್ರೀರಂಗಪಟ್ಟಣದಲ್ಲಿ ಟಿಪ್ಪು ಜಯಂತಿ ಕಾರ್ಯಕ್ರಮ ಸುಸೂತ್ರವಾಗಿ ನಡೆಯಿತಾದರೂ, ಮಧ್ಯಾಹ್ನದ ವೇಳೆಗೆ ಮೈಸೂರಿನಿಂದ ಬೈಕ್ ರ್ಯಾಲಿಯಲ್ಲಿ ಆಗಮಿಸಿದ ಮುಸ್ಲಿಂ ಯುವಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಸಾವಿರಾರು ಮುಸ್ಲಿಂ ಯುವಕರು ಶ್ರೀರಂಗಪಟ್ಟಣದ ಟಿಪ್ಪು ಸಮಾಧಿಗೆ ದುವಾ ಸಲ್ಲಿಸಲು ಆಗಮಿಸಿದಾಗ ಪಟ್ಟಣದ ಹೊರವಲಯದಲ್ಲೇ ಪೊಲೀಸರು ತಡೆಯೊಡ್ಡಿದರು.
ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಬಾವುಟವಿಡಿದು ಗುಂಪಾಗಿ ಸಂಚರಿಸುವಂತಿಲ್ಲವೆಂದು ಪೊಲೀಸರು ಯುವಕರಿಗೆ ಸ್ಪಷ್ಟಪಡಿಸಿದರು. ಆದರೆ, ಯುವಕರು ಅದನ್ನು ಪರಿಗಣಿಸದೆ ಸಮಾಧಿ ಕಡೆಗೆ ತೆರಳಲು ಮುಂದಾದಾಗ ಮಾತಿನ ಚಕಮಕಿ ನಡೆದು ಸ್ವಲ್ಪ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಪೊಲೀಸರ ವಾಹನ ಚಾಲಕ, ಪೇದೆ ಒಳಗೊಂಡಂತೆ ಮೂವರು ಪೊಲೀಸ್ ಅಧಿಕಾರಿಗಳನ್ನು ಯುವಕರ ಗುಂಪು ಎಳೆದಾಡಿತು ಎನ್ನಲಾಗಿದೆ. ಕೊನೆಗೆ ಯುವಕರು ಟಿಪ್ಪು ಸಮಾಧಿಗೆ ತಲುಪಿ ದುವಾ ಸಲ್ಲಿಸಿದರು.
ಪಾಂಡವಪುರ: ಜಯಂತಿ ವಿರೋಧಿಸಿ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ತಾಲೂಕು ಬಿಜೆಪಿ ಅಧ್ಯಕ್ಷ ಪ.ಮ. ರಮೇಶ್, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಎಚ್.ಎನ್.ಮಂಜುನಾಥ್, ಸೇರಿದಂತೆ ಹಲವರನ್ನು ಬಂಧಿಸಿದ ಪೊಲೀಸರು, ಕಾರ್ಯಕ್ರಮದ ನಂತರ ಬಿಡುಗಡೆ ಮಾಡಿದರು.
ಹಳೇ ಬಸ್ ನಿಲ್ದಾಣದಲ್ಲಿ ನಿಂತು ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆಂಬ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ರೈತ ಮೋರ್ಚಾ ಜಿಲ್ಲಾಧ್ಯಕ ಎಚ್.ಎನ್.ಮಂಜುನಾಥ್ ನಡುವೆ ಸ್ವಲ್ಪ ಸಮಯ ವಾಗ್ವಾದ ನಡೆಯಿತು.
ಆಮಂತ್ರಣ ಪತ್ರ ಜತೆಗೆ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಬಿಜೆಪಿ ತಾಲೂಕು ಪಂಚಾಯತ್ ಸದಸ್ಯೆ ಮಂಗಳಾ ನವೀನ್‍ಕುಮಾರ್ ಅವರನ್ನು ಪೊಲೀಸರು ವಾಪಸ್ ಕಳುಹಿಸಿದರು.