×
Ad

ಟಿಪ್ಪು ದೇಶಕ್ಕೆ ಜೀವವನ್ನೇ ಬಲಿಕೊಟ್ಟ ಮಹಾನ್ ಪುರುಷ: ಪುಟ್ಟರಾಜು

Update: 2017-11-10 22:29 IST

ಮಂಡ್ಯ, ನ.10: ಬ್ರಿಟಿಷರ ವಿರುದ್ಧ ಹೋರಾಡಿ ದೇಶದ ಸ್ವಾತಂತ್ರ್ಯಕ್ಕೆ ತನ್ನ ಜೀವವನ್ನೆ ಬಲಿಕೊಟ್ಟ ಟಿಪ್ಪು ಸುಲ್ತಾನ್ ಮಹಾನ್ ಪುರುಷ ಎಂದು ಸಂಸದ ಸಿ.ಎಸ್.ಪುಟ್ಟರಾಜು  ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ವತಿಯಿಂದ ಶುಕ್ರವಾರ ನಗರದ ಕಲಾಮಂದಿರದಲ್ಲಿ ನಡೆದ ಹಝರತ್ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಟಿಪ್ಪು ಸುಲ್ತಾನ್ ತನ್ನ ಆಳ್ವಿಕೆ ಕಾಲವಧಿಯಲ್ಲಿ ಕೈಗೊಂಡ ಹಲವಾರು ಜನಪರ ಮತ್ತು ರೈತಪರ ಆಡಳಿತ ಕ್ರಮಗಳು ಮತ್ತು ಬ್ರಿಟಿಷರ ವಿರುದ್ಧ ಹೋರಾಡಿದ ದಿನಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಸಾಹಿತಿ ಪ್ರೊ.ಎಂ.ಕರೀಮುದ್ದೀನ್ ಉಪನ್ಯಾಸ ನೀಡುತ್ತಾ, ತ್ಯಾಗ ಎಂಬುದು ಅಮೃತಕ್ಕೆ ಸಮಾನವಾದದ್ದು. ಅದರಲ್ಲೂ ದೇಶದ ಸ್ವಾತಂತ್ರ್ಯಕ್ಕೆ ಟಿಪ್ಪು ಸುಲ್ತಾನ್ ತ್ಯಾಗ ಅತಿ ದೊಡ್ಡದು ಎಂದು ವಿಶ್ಲೇಷಿಸಿದರು.

ಸತ್ಯ ಯಾವಗಲೂ ಜಯಂತಿಯಲ್ಲಿ ಸಿಗುವುದಿಲ್ಲ. ಸಂಶೋಧನೆಯಲ್ಲಿ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾದುದು ಆತ್ಮ ಸಂಶೋಧನೆ. ಟಿಪ್ಪು ಸುಲ್ತಾನ್ ಮೈಸೂರು ಪ್ರಾಂತ್ಯದಲ್ಲಿ ನೀಡಿದ ಆಡಳಿತ ಕೊಡುಗೆ ಅಪಾರವಾದುದು ಎಂದು ಹೇಳಿದರು.

ಟಿಪ್ಪು ಸುಲ್ತಾನ್ ಮಹಾನ್ ದೇಶಾಭಿಮಾನಿ. ಬ್ರಿಟಿಷ್ ಆಳ್ವಿಕೆಯಲ್ಲಿ ಮದ್ರಾಸ್‍ನಿಂದ ಮೈಸೂರು ಪ್ರಾಂತಕ್ಕೆ ಬರುತ್ತಿದ್ದ ಉಪ್ಪನ್ನು ಬಹಿಷ್ಕರಿಸಿ, ತಾನೇ ಸ್ವದೇಶಿಯವಾಗಿ ಉಪ್ಪು ತಯಾರಿಸು ಮೂಲಕ ಟಿಪ್ಪು ಬ್ರಿಟಿಷ್ ವಿರುದ್ಧ ಹೋರಾಟಕ್ಕೆ ಮುಂದಾದರು ಎಂದು ಅವರು, ಭೂ ಸುಧಾರಣೆ ಕಾನೂನು, ದೇವಾಲಯಯಗಳಿಗೆ ನೀಡಿದ ಸೇವೆ ಹಾಗೂ ಜನರ ಶ್ರೇಯೋಭಿವೃದ್ಧಿ ಇವುಗಳು ಜನರ ಹಿತಕ್ಕೆ ಕಾರಣವಾಯಿತು. ಹೊಸದಾಗಿ ಕೃಷಿ ಮಾಡುವ ರೈತರಿಗೆ 5 ವರ್ಷ ಕಂದಾಯ ವಿಧಿಸಬಾರದು. ನಂತರದ 5 ವರ್ಷ ಅರ್ಧ ಕಂದಾಯ ತೆಗೆದುಕೊಳ್ಳಬೇಕು. ಎಂದು ಟಿಪ್ಪು ಫರ್ಮಾನು ಹೊರಡಿಸಿದ್ದರು. ಭೂಸುಧಾರಣೆ ಕಾನೂನು ಮೂಲಕ ರೈತರಿಗೆ ನೆರವಾದರು ಎಂದು ಅವರು ವಿವರಿಸಿದರು.

ಈ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹೊರತಂದಿರುವ ಟಿಪ್ಪು ಸುಲ್ತಾನ್ ಕುರಿತ ಕಿರುಹೊತ್ತಗೆಯನ್ನು ಸಂಸದ ಪುಟ್ಟರಾಜು ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರು ಬಿಡುಗಡೆ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೆಗೌಡ, ಮುಡಾ ಅಧ್ಯಕ್ಷ ಮುನಾವರ್ ಖಾನ್, ತಾಲೂಕು ಪಂಚಾಯತ್ ಅಧ್ಯಕ್ಷ ಕೆ.ಎಂಬೀರಪ್ಪ, ಜಿಲ್ಲಾಧಿಕಾರಿ ಎನ್.ಮಂಜುಶ್ರೀ,  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಶರತ್, ಉಪವಿಭಾಗಧಿಕಾರಿ ರಾಜೇಶ್, ಅಪರ ಜಿಲ್ಲಾಧಿಕಾರಿ ಬಿ.ಪಿ.ವಿಜಯ್ ಮತ್ತು ಇತರೆ ಮುಖಂಡರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News