ಟಿಪ್ಪು ಜಯಂತಿಗೆ ನಮ್ಮ ವಿರೋಧವಿಲ್ಲ: ಎಚ್.ಡಿ.ದೇವೇಗೌಡ
ಮದ್ದೂರು, ನ.10: ಟಿಪ್ಪು ಜಯಂತಿ ಆಚರಣೆ ವಿಚಾರ ವಿವಾದವಾಗುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಹುಟ್ಟುಹಬ್ಬ ಆಚರಿಸಿ ಸನ್ಮಾನ ಸ್ವೀಕರಿಸಿರಲಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.
ಶುಕ್ರವಾರ ಮುಡೇನಹಳ್ಳಿಯ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದ ಮಾರ್ಗಮಧ್ಯೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನಮ್ಮ ಪಕ್ಷದಲ್ಲಿದ್ದಾಗಲೂ ಟಿಪ್ಪು ಜಯಂತಿ ಆಚರಿಸಲಾಗಿತ್ತು ಎಂದರು.
ಟಿಪ್ಪು ಜಯಂತಿಗೆ ನಮ್ಮ ವಿರೋಧವಿಲ್ಲ. ಸರಕಾರದ ನಿರ್ದೇಶನದಂತೆ ಜಯಂತಿ ಆಚರಣೆ ನಡೆಯುತ್ತಿದೆ. ನಮ್ಮ ಪಕ್ಷದ ಕಚೇರಿಯಲ್ಲೂ ಆಚರಿಸುತ್ತೇವೆ. ರಾಜಕೀಯ ದುರುದ್ದೇಶದಿಂದ ಜಯಿಂತಿಗೆ ವಿರೋಧ ಸಲ್ಲದು ಎಂದು ಅವರು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಶಾಸಕ ಡಿ.ಸಿ.ತಮ್ಮಣ್ಣ, ಪುರಸಭಾ ಅಧ್ಯಕ್ಷೆ ಲತಾ ಬಸವರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾಹರೀಶ್, ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ, ಎಸ್.ಪಿ.ಸ್ವಾಮಿ, ಹರೀಶ್, ಇತರ ಮುಖಂಡರು ಹಾಜರಿದ್ದರು.