×
Ad

ಇತಿಹಾಸ ತಿಳಿಯದೇ ಟಿಪ್ಪು ಬಗ್ಗೆ ಟೀಕೆ ಸರಿಯಲ್ಲ: ಕೃಷ್ಣಮೂರ್ತಿ

Update: 2017-11-10 23:41 IST

ಮೂಡಿಗೆರೆ, ನ.10: ಟಿಪ್ಪುವಿನ ರಾಜಧಾನಿ ಶ್ರೀರಂಗಪಟ್ಟಣ ಸಾಮರಸ್ಯದ ಕೇಂದ್ರವಾಗಿದೆ. ಅಲ್ಲಿ ಮುಸ್ಲಿಂಮರ ಸಂಖ್ಯೆ ತೀರಾ ಕ್ಷೀಣಿಸಿದೆ. ಹಿಂದೂಗಳ ಸಂಖ್ಯೆ ಹೆಚ್ಚಾಗಿದೆ. ಟಿಪ್ಪುವಿನ ರಾಜಧಾನಿಯಲ್ಲೇ ಮುಸ್ಲಿಂಮರ ಸಂಖ್ಯೆ ಕಡಿಮೆಯಾಗಲು ಟಿಪ್ಪುವಿನಲ್ಲಿದ್ದ ಹಿಂದೂ ಪ್ರೀತಿಯೇ ಸಾಕ್ಷಿ. ಇತಿಹಾಸ ತಿಳಿಯದೇ ಟಿಪ್ಪು ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಸಮಾಜ ಪರಿವರ್ತನಾ ಮುಖಂಡ ಮಂಡ್ಯದ ಕೃಷ್ಣಮೂರ್ತಿ ಹೇಳಿದ್ದಾರೆ.

 ಅವರು ಶುಕ್ರವಾರ ತಾಲೂಕು ಆಡಳಿತದಿಂದ ಅಡ್ಯಂತಾಯ ರಂಗಮಂದಿರದಲ್ಲಿ ನಡೆಸಿದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಮಹಾರಾಜರುಗಳ 600 ಸಂಸ್ಥಾನವಿತ್ತು. 600 ಮಹಾರಾಜರು ಬ್ರಿಟಿಷರ ಜೊತೆಯಲ್ಲೇ ಇದ್ದರು. ಆದರೆ ಟಿಪ್ಪು ಮಾತ್ರ ಬ್ರಿಟಿಷರ ಹಾಗೂ ಹೈದರಾಬಾದ್ ನಿಜಾಮರು ಮತ್ತು ಮರಾಠರನ್ನು ವಿರೋಧಿಸಿ ನೈಜ ಭಾರತೀಯ ದೊರೆಯಾಗಿದ್ದ. ಒಂದು ವೇಳೆ ಟಿಪ್ಪು ಬ್ರಿಟಿಷರ ಪರವಾಗಿದ್ದರೆ ಟಿಪ್ಪುವನ್ನು ಬ್ರಿಟಿಷರು ಪಲ್ಲಕ್ಕಿಯಲ್ಲಿ ಹೊತ್ತು ತಿರುಗುತ್ತಿದ್ದರೆ ವಿನಹ ಕೊಂದು ಹಾಕುತ್ತಿರಲಿಲ್ಲ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಬಿ.ಬಿ.ನಿಂಗಯ್ಯ ವಹಿಸಿ ಮಾತನಾಡಿ, ಸುಳ್ಳು ಇತಿಹಾಸವನ್ನು ಬರೆದವರು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನವನ್ನು ಒಪ್ಪದಿದ್ದವರು ಟಿಪ್ಪುಸುಲ್ತಾನ್ ಅವರು ಮುಸ್ಲಿಂ ಆದ ಕಾರಣ ಅವರನ್ನು ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.

ಎಮ್ಮೆಲ್ಸಿ ಮೋಟಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಬ್ರಿಟಿಷರ ವಿರುದ್ಧ ತಮ್ಮ ಮಕ್ಕಳನ್ನೇ ಒತ್ತೆಯಿಟ್ಟು, ಹೋರಾಡಿದ ಮಹಾನ್ ದೇಶ ಪ್ರೇಮಿ ಟಿಪ್ಪು ಸುಲ್ತಾನ್ ಅವರನ್ನು ರಾಷ್ಟ್ರಪತಿ ರಮನಾಥ ಕೋವಿಂದ ಅವರು ವಿಧಾನಸೌಧದಲ್ಲಿ ಟಿಪ್ಪು ಹೋರಾಟವನ್ನು ಮೆಲುಕು ಹಾಕಿ ಹೊಗಳಿದ್ದಾರೆ. ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಸಹಿತ ಬಿಜೆಪಿಯ ರಾಜ್ಯ ನಾಯಕರು ಟಿಪ್ಪು ವೇಷ ಧರಿಸಿ ಹೊಗಳಿಕೆ ಹಾಕಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯ ನಿಕಿಲ್ ಚರ್ಕವರ್ತಿ, ಮಾಜಿ ಸದಸ್ಯ ಎಂಎಸ್‌ಅನಂತ್, ಪಪಂ ಅಧ್ಯಕ್ಷೆ ರಮಿಝಾಬಿ, ಸದಸ್ಯರಾದ ಪವಾರ್ವತಮ್ಮ, ಷಣ್ಮುಖಾನಂದ, ಎಚ್.ಪಿ.ರಮೇಶ್, ಅಕ್ತರ್‌ಉನ್ನೀಸಾ, ಎನ್.ಆರ್.ನಾಗರತ್ನ, ಸಿಪಿಐಎಂಎಲ್ ರಾಜ್ಯ ಕಾರ್ಯದರ್ಶಿ ಬಿ.ರುದ್ರಯ್ಯ, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಜಾರ್ ಹುಸೇನ್, ಲೋಕವಳ್ಳಿ ರಮೇಶ್, ತಾಲೂಕು ಅಧ್ಯಕ್ಷ ಪಿ.ಕೆ.ಮಂಜುನಾಥ್, ಮಲೆನಾಡು ಮುಸ್ಲಿಂ ವೇದಿಕೆ ಅಧ್ಯಕ್ಷ ಸಿ.ಕೆ.ಇಬ್ರಾಹೀಂ, ಅಬ್ರಾರ್, ಉಪಾಧ್ಯಕ್ಷ ಶಬ್ಬೀರ್ ಅಹಮ್ಮದ್ ಬೇಗ್, ಅಕ್ರಮ್ ಹಾಜಿ, ಕಲಂದರಿಯ ಅನಾಥಾಶ್ರಮದ ಪ್ರಾಂಶುಪಾಲ ಹಂಝ ಮುಸ್ಲಿಯಾರ್, ವಾಜೀದ್ ಹುಸೇನ್, ಜಕ್ರಿಯಾ, ನಾಸಿರ್, ಮರಗುಂದ ಪ್ರಸನ್ನ, ತಹಶೀಲ್ದಾರ್ ನಂದಕುಮಾರ್, ಉಪ ತಹಶೀಲ್ದಾರ್ ಮಂಜುನಾಥ್ ಧನಂಜಯ, ಗುರುರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News