ಪ್ರವೇಶ ಪರೀಕ್ಷೆಗೆ ಇನ್ನು ಹೊಸ ಸ್ವಾಯತ್ತ ಸಂಸ್ಥೆ

Update: 2017-11-11 04:18 GMT

ಹೊಸದಿಲ್ಲಿ, ನ. 11: ಪ್ರವೇಶ ಪರೀಕ್ಷೆಗಳನ್ನು ಆಯೋಜಿಸುವ ಹೊಣೆಯಿಂದ ಸಿಬಿಎಸ್‌ಇ ಹಾಗೂ ಎಐಸಿಟಿಇಯನ್ನು ಮುಕ್ತಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಉದ್ದೇಶಕ್ಕಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಎಂಬ ಪ್ರತ್ಯೇಕ ಸ್ವಾಯತ್ತ ಸಂಸ್ಥೆಯನ್ನು ಆರಂಭಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಈ ಏಜೆನ್ಸಿ ಪ್ರವೇಶ ಪರೀಕ್ಷೆಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆ ತರಲು ಹಾಗೂ ವಿದ್ಯಾರ್ಥಿಗಳ ಬುದ್ಧಿಮತ್ತೆ, ಆಪ್ಟಿಟ್ಯೂಡ್ ಮತ್ತು ಸಮಸ್ಯೆ ನಿವಾರಿಸುವ ಸಾಮರ್ಥ್ಯವನ್ನು ಅಳೆಯಲು ನಿಗದಿತ ಕಠಿಣ ಮಟ್ಟವನ್ನು ನಿರ್ಧರಿಸುವ ಉದ್ದೇಶ ಹೊಂದಿದೆ.

ಸಿಬಿಎಸ್‌ಇ ಮಂಡಳಿಯ ಮಾಮೂಲಿ ಪರೀಕ್ಷೆಯನ್ನು ಹೊರತುಪಡಿಸಿ, ಜಂಟಿ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಜೆಇಇ), ಎನ್‌ಇಇಟಿ ಮತ್ತು ಯುಜಿಸಿಯ ನ್ಯಾಷನಲ್ ಎಲಿಜಿಬಿಲಿಟಿ ಟೆಸ್ಟ್, ಸೆಂಟ್ರಲ್ ಟೀಚರ್ ಎಲಿಜಿಬಿಲಿಟಿ ಟೆಸ್ಟ್ ಹಾಗೂ ಜವಾಹರ್ ನವೋದಯ ವಿದ್ಯಾಲಯಗಳ ಪ್ರವೇಶ ಪರೀಕ್ಷೆ ಆಯೋಜಿಸುವ ಹೊಣೆಯಿಂದ ಸಿಬಿಎಸ್‌ಇಯನ್ನು ಮುಕ್ತಗೊಳಿಸಲಾಗಿದೆ.

ಎನ್‌ಟಿಎ ಭಾರತದ ಸೊಸೈಟಿಗಳ ನೋಂದಣಿ ಕಾಯ್ದೆ- 1860ರಡಿ ನೋಂದಾಯಿತ ಸಂಸ್ಥೆಯಾಗಿ ಅಸ್ತಿತ್ವಕ್ಕೆ ಬರಲಿದೆ. ಇದು ಸ್ವಾಯತ್ತ ಹಾಗೂ ಸ್ವಯಂ ಸುಸ್ಥಿರ ಪರೀಕ್ಷಾ ಸಂಸ್ಥೆಯಾಗಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳ ಎಲ್ಲ ಪ್ರವೇಶ ಪರೀಕ್ಷೆಗಳನ್ನು ನಿರ್ವಹಿಸಲಿದೆ ಎಂದು ಪ್ರಕಟಣೆ ಹೇಳಿದೆ. ಎನ್‌ಟಿಎ ಆರಂಭದಲ್ಲಿ ಸಿಬಿಎಸ್‌ಇ ನಿರ್ವಹಿಸುತ್ತಿದ್ದ ಎಲ್ಲ ಪರೀಕ್ಷೆಗಳನ್ನು ನಡೆಸಲಿದೆ. ಬಳಿಕ ಇತರ ಪರೀಕ್ಷೆಗಳನ್ನು ನಡೆಸುವ ಹೊಣೆಯನ್ನೂ ವಹಿಸಿಕೊಳ್ಳಿದೆ.

ಎನ್‌ಟಿಎ ಅಡಿಯಲ್ಲಿ ಪ್ರವೇಶ ಪರೀಕ್ಷೆಗಳನ್ನು ಆನ್‌ಲೈನ್ ಮಾದರಿಯಲ್ಲಿ ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಉತ್ತಮ ಕ್ಷಮತೆಯನ್ನು ತೋರಲು ಅಗತ್ಯವಾದ ಅವಕಾಶವನ್ನು ಒದಗಿಸಲಿದೆ ಎಂದು ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News