ಕ್ಯಾನ್ಸರ್ ಪತ್ತೆಹಚ್ಚಲು ವೈದ್ಯರಿಗೆ ಆನ್‌ಲೈನ್ ತರಬೇತಿ: ಮುಂಬೈಯ ಟಾಟಾ ಆಸ್ಪತ್ರೆಯ ಉಪಕ್ರಮ

Update: 2017-11-11 17:38 GMT

ಮುಂಬೈ, ನ.11:ಕ್ಯಾನ್ಸರ್ ರೋಗವನ್ನು ಆರಂಭದ ಹಂತದಲ್ಲೇ ಪತ್ತೆಹಚ್ಚಲು ಹಾಗೂ ಇದಕ್ಕೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡುವ ಉದ್ದೇಶದಿಂದ ವೈದ್ಯರಿಗೆ ಆನ್‌ಲೈನ್ ತರಬೇತಿಯನ್ನು ಪರೇಲ್‌ನ ಟಾಟಾ ಸ್ಮಾರಕ ಆಸ್ಪತ್ರೆಯ ವೈದ್ಯರು ಆರಂಭಿಸಿದ್ದಾರೆ.

      ರಾಜ್ಯ ಸರಕಾರದ ಸಹಯೋಗದಲ್ಲಿ ಈ ಯೋಜನೆಯನ್ನು ಆರಂಭಿಸಲಾಗಿದೆ ಎಂದು ಆಸ್ಪತ್ರೆಯ ‘ಶಿರ ಮತ್ತು ಕುತ್ತಿಗೆ ಶಸ್ತ್ರಚಿಕಿತ್ಸೆ ವಿಭಾಗ’ದ ಮುಖ್ಯಸ್ಥ ಡಾ ಪಂಕಜ್ ಚತುರ್ವೇದಿ ತಿಳಿಸಿದ್ದಾರೆ. ವೈದ್ಯರು, ಸ್ತ್ರೀರೋಗ ಶಾಸ್ತ್ರಜ್ಞರು, ದಂತವೈದ್ಯರು ಹಾಗೂ ಕ್ಯಾನ್ಸರ್ ರೋಗ ತಜ್ಞ ವೈದ್ಯರಲ್ಲದ, ಆರೋಗ್ಯಕ್ಷೇತ್ರದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಇತರರು ಈ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆಯಬಹುದಾಗಿದೆ. ವೈದ್ಯಕೀಯ ವಿಚಾರಸಂಕಿರಣಗಳಲ್ಲಿ ಪಾಲ್ಗೊಳ್ಳಲು ಸಮಯವಿಲ್ಲದ , ಗ್ರಾಮೀಣ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಮಿಲಿಯಾಂತರ ವೈದ್ಯರನ್ನು ಆನ್‌ಲೈನ್ ತರಬೇತಿ ಕಾರ್ಯಕ್ರಮದ ಮೂಲಕ ತಲುಪಲು ನಾವು ಪ್ರಯತ್ನಿಸಲಿದ್ದೇವೆ ಎಂದವರು ತಿಳಿಸಿದ್ದಾರೆ.

ಕ್ಯಾನ್ಸರ್ ರೋಗವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಿದರೆ ರೋಗಿ ಬದುಕುಳಿಯುವ ಅವಕಾಶ ಹೆಚ್ಚಿರುತ್ತದೆ ಹಾಗೂ ಚಿಕಿತ್ಸೆಯ ವೆಚ್ಚ ಕೂಡಾ ಕಡಿಮೆಯಾಗುತ್ತದೆ ಎಂದು ಡಾ ಚತುರ್ವೇದಿ ತಿಳಿಸಿದ್ದಾರೆ.

7 ವಾರಗಳ ಈ ತರಬೇತಿ ಕಾರ್ಯಕ್ರಮದಲ್ಲಿ 14 ಗಂಟೆ ಅವಧಿಯ ವೀಡಿಯೋ ಉಪನ್ಯಾಸ, ಸಂವಾದ ಕಾರ್ಯಕ್ರಮ, ಪ್ರಶೋತ್ತರ ಇತ್ಯಾದಿ ಒಳಗೊಂಡಿರುತ್ತದೆ. ಪಠ್ಯಸಾಮಾಗ್ರಿಯನ್ನು www.omnicuris.com ನಿಂದ ಉಚಿತವಾಗಿ ಪಡೆಯಬಹುದಾಗಿದೆ .

  ಇ-ಲರ್ನಿಂಗ್ ಕಾರ್ಯಕ್ರಮದ ಮೂಲಕ ವೈದ್ಯರಿಗೆ ಕ್ಯಾನ್ಸರ್ ರೋಗದ ಬಗ್ಗೆ ತರಬೇತಿ ನೀಡುವ ತಿಂಗಳಾವಧಿಯ ಕಾರ್ಯಕ್ರಮವನ್ನು ಡಿಸೆಂಬರ್‌ನಲ್ಲಿ ಸರಕಾರ ಹಮ್ಮಿಕೊಂಡಿದ್ದು ಒಟ್ಟು 8,500 ಸರಕಾರಿ ವೈದ್ಯರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಆರೋಗ್ಯಸೇವಾ ವಿಭಾಗದ ನಿರ್ದೇಶಕ ಡಾ ಸತೀಶ್ ಪವಾರ್ ತಿಳಿಸಿದ್ದಾರೆ. ಆರಂಭದಲ್ಲಿ ಮಹಾರಾಷ್ಟ್ರ ರಾಜ್ಯದ ವೈದ್ಯರಿಗೆ ಹಮ್ಮಿಕೊಳ್ಳಲಾಗುವ ಇ-ಲರ್ನಿಂಗ್ ಕಾರ್ಯಕ್ರಮವನ್ನು ಕ್ರಮೇಣ ರಾಷ್ಟ್ರಮಟ್ಟಕ್ಕೆ ವಿಸ್ತರಿಸಲಾಗುವುದು ಎಂದವರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತೀ ವರ್ಷ 1 ಲಕ್ಷಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣ ವರದಿಯಾಗುತ್ತಿದ್ದು ಇದರಲ್ಲಿ ರೋಗ ಉಲ್ಬಣಾವಸ್ತೆಗೆ ತಲುಪಿದ ಬಳಿಕ ಚಿಕಿತ್ಸೆಗೆ ದಾಖಲಾಗುತ್ತಿರುವ ಕಾರಣ ಶೇ.50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ . ಪ್ರಸ್ತುತ ಭಾರತದಲ್ಲಿ 30 ಲಕ್ಷಕ್ಕೂ ಹೆಚ್ಚು ಮಂದಿ ಯಾವುದಾದರೂ ಒಂದು ವಿಧದ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News