ಶಿಕ್ಷಣದಲ್ಲಿ ಉತ್ತರದಾಯಿತ್ವ

Update: 2017-11-11 18:15 GMT

ಮಾನವನ ಬದುಕಿನಲ್ಲಿ ವಿದ್ಯೆಯ ಮಹತ್ವವನ್ನು ಯಾರೂ ಅಲ್ಲಗಳೆಯಲಾರರು. ರಾಷ್ಟ್ರದ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರ ಪ್ರಮುಖವಾದದ್ದು. ಪ್ರಜೆಗಳ ಸಚ್ಚಾರಿತ್ರ್ಯವನ್ನು ರೂಪಿಸುವುದರಲ್ಲಿ ನಿಸ್ಸಂದೇಹವಾಗಿ ಶಿಕ್ಷಣದ ಪಾಲು ದೊಡ್ಡದು. ಅಂತೆಯೇ ಸಮಾಜದಲ್ಲಿ ಸೃಜನಶೀಲ ಪರಿಸರವನ್ನು ಸೃಷ್ಟಿಸುವುದರಲ್ಲಿ ಹಾಗೂ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಉಜ್ವಲವಾಗಿ ಬೆಳಗಿಸುವುದರಲ್ಲೂ ಶಿಕ್ಷಣದ್ದೇ ಪ್ರಧಾನ ಪಾತ್ರ. ಒಟ್ಟಾರೆಯಾಗಿ ಶಿಕ್ಷಣ ಒಂದರಿಂದಲೇ ಮಿಕ್ಕ ಎಲ್ಲದರ ಯಶಸ್ಸು. ಎಂದೇ ಶಿಕ್ಷಣ/ದೇಶದ ಶಿಕ್ಷಣ ನೀತಿ ನಿರಂತರವಾಗಿ ಚರ್ಚೆ-ಸಂವಾದಗಳ ಕೇಂದ್ರ ಬಿಂದುವಾಗಿರುವುದು. ಸ್ವಾತಂತ್ರ್ಯಾನಂತರದ ಈ ಎಪ್ಪತ್ತು ವರ್ಷ ಗಳಲ್ಲಿ ಸರಕಾರದ ಶಿಕ್ಷಣ ನೀತಿಯಲ್ಲಿ ಹಲವಾರು ಸಲ ಹಲವು ಬಗೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಮೂಲಭೂತ ಸಾಕ್ಷರತೆ, ಸಾಂಸ್ಕೃತಿಕ ಪರಂಪರೆ, ಇತಿಹಾಸಗಳ ಕಲಿಕೆ ಜೊತೆಗೆ ಕಾಲದ ಬೇಡಿಕೆಗಳಿಗೆ ಸ್ಪಂದಿಸುವ ಅನಿವಾರ್ಯತೆಯುಳ್ಳ ಶಿಕ್ಷಣ ಪದ್ಧತಿ ನಿಂತ ನೀರಾಗಬಾರದು ಎನ್ನುವ ವಾದದಲ್ಲಿ ಹುರುಳಿಲ್ಲದೇ ಇಲ್ಲ. ಶಿಕ್ಷಣ ಕುರಿತ ಹೊಣೆಗಾರಿಕೆ ಮಾತ್ರ ನಿರಂತರ ಚರ್ಚಾಸ್ಪದ ವಿಷಯವಾಗಿದೆ. ಸರಕಾರ, ಪೋಷಕರು, ವಿದ್ಯೆ ಕಲಿಸುವ ಗುರುಗಳು ಇವರೆಲ್ಲ ಈ ಹೊಣೆಯಲ್ಲಿ ಪಾಲುದಾರರು. ವಿಚಿತ್ರ ಎಂದರೆ ನಮ್ಮ ದೇಶದಲ್ಲಿ ಶಿಕ್ಷಣ, ಶಿಕ್ಷಣ ಪದ್ದತಿ ಕುರಿತ ಹೊಣೆಗಾರಿಕೆ ಯಾರಿಗೂ ಬೇಡದ ವಿಷಯವಾಗಿರುವುದು.

ಈಚಿನ ದಿನಗಳಲ್ಲಿ ಶಾಲಾ ಶಿಕ್ಷಣದ ಹೊಣೆಗಾರಿಕೆ, ಉತ್ತರ ದಾಯಿತ್ವ ಎನ್ನುವುದು ವಾದವಿವಾದಗಳಿಗೆ ಎಡೆಮಾಡಿಕೊಟ್ಟರುವ ಸಂಗತಿಯಾಗಿರುವಂತಿದೆ. ಕಲಿಕೆಯಲ್ಲಿ ವಿದ್ಯಾರ್ಥಿಗಳ ಸಾಧನೆ, ಪರೀಕ್ಷಾ ಫಲಿತಾಂಶ ಇವುಗಳಿಗೆ ಪಾಠ ಹೇಳುವ ಮಾಸ್ತರರೇ ಹೊಣೆ, ಕಲಿಕೆಯಲ್ಲಿ ವಿದಾರ್ಥಿಗಳ ಹಿಂದುಳಿದಿರುವುಕೆ, ನಪಾಸು, ಶೇಕಡಾವಾರು ಫಲಿತಾಂಶದಲ್ಲಿ ಇಳಿಕೆ ಇವೆಲ್ಲದಕ್ಕೂ ಉಪಾಧ್ಯಾಯರೇ ಉತ್ತರ ಕೊಡಬೇಕು ಎಂಬುದು ಸಾರ್ವತ್ರಿಕವಾಗಿರುವ ಅಭಿಪ್ರಾಯ. ಆದರೆ ಶಿಕ್ಷಣ ಪದ್ಧತಿಯ ಯಶಸ್ಸು, ಹಿನ್ನಡೆಗಳನ್ನು ನಿಷ್ಕರ್ಷಿಸಲು ಪರೀಕ್ಷೆ/ಟೆಸ್ಟುಗಳಲ್ಲಿ ವಿದ್ಯಾರ್ಥಿಗಳು ತೆಗೆದಿರುವ ಅಂಕಗಳು, ಫಲಿತಾಂಶದ ಶೇಕಡವಾರು ಪ್ರಮಾಣ ಇವಷ್ಟೇ ಮಾನದಂಡವಾಗಲಾರವು. ಶೈಕ್ಷಣಿಕ ಸಾಧನೆಗಳಲ್ಲಿನ ಏಳು-ಬೀಳು, ಕುಂದುಕೊರತೆಗಳಿಗೆ, ಕಲಿಕೆಯಲ್ಲಿ ವಿರ್ದಾರ್ಥಿಗಳ ಹಿಂದುಳಿದಿರುವಿಕೆಗೆ ಉಪಾಧ್ಯಾಯ ವೃಂದವನ್ನಷ್ಟೆ ದೂಷಿಸುವುದು ಸರಿಯಲ್ಲ ಎಂಬ ಅಭಿಪ್ರಾಯವೂ ಈಚಿನ ದಿನಗಳಲ್ಲಿ ಮಾನ್ಯತೆ ಪಡೆಯುತ್ತಿದೆ.

 ಜಗತ್ತಿನಾದ್ಯಂತ ಎಲ್ಲರಿಗೂ ಒಳ್ಳೆಯ ಶಿಕ್ಷಣ ಸಿಗಬೇಕು, ಜೀವಮಾನ ವಿಡೀ ಕಲಿಯುವುದನ್ನು ಪ್ರೋತ್ಸಾಹಿಸಬೇಕೆಂಬುದು ಯುನೆಸ್ಕೋದ ಮಹತ್ವಾಕಾಂಕ್ಷೆಯ ಗುರಿ. ಇದನ್ನು ಸಾಧಿಸಬೇಕಾದರೆ ಜಾಗತಿಕ ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ, ಉತ್ತರದಾಯಿತ್ವಗಳು ಇರಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಹೊಣೆಗಾರಿಕೆ ಮತ್ತು ಉತ್ತರದಾಯಿತ್ವಗಳನ್ನು ಗೊತ್ತುಪಡಿಸಬೇಕು ಎನ್ನುವ ಅಂಶವನ್ನು ಜಾಗತಿಕ ಶಿಕ್ಷಣದ ಮೇಲ್ವಿಚಾರಣೆ ಕುರಿತ 2017-18ನೇ ಸಾಲಿನ ಯುನೆಸ್ಕೊ ವರದಿಯಲ್ಲಿ ಒತ್ತಿ ಹೇಳಲಾಗಿದೆ. ಪ್ರಪಂಚದಾದ್ಯಂತ ಒಳ್ಳೆಯ ಗುಣಮಟ್ಟದ ಶಿಕ್ಷಣದ ಯಶಸ್ಸು ಉಪಾಧ್ಯಾಯರ ಕಾರ್ಯಸಾಧನೆಗಳನ್ನಷ್ಟೇ ಅವಲಂಬಿಸಿಲ್ಲ. ಅದರ ಯಶಸ್ಸಿನಲ್ಲಿ ಉಳಿದ ಭಾಗೀದಾರರ ಹೊಣೆಗಾರಿಕೆಯೂ ಇದೆ. ಉಳಿದ ಭಾಗೀದಾರರು ಎಂದರೆ, ಸರಕಾರ, ಶಾಲೆಗಳು, ತಂದೆತಾಯಿ ಮೊದಲಾದ ಪೋಷಕರು, ಮಾಧ್ಯಮಗಳು, ಸಮಾಜ, ಖಾಸಗಿ ಕ್ಷೇತ್ರ ಮತ್ತು ಅಂತಾರಾಷ್ಟ್ರೀಯ ಸಂಘಸಂಸ್ಥೆಗಳು ಇವೆಲ್ಲದರ ಪಾಲೂ ಇದೆ.ಇಡೀ ಹಳ್ಳಿ, ಊರು, ಪಟ್ಟಣವನ್ನೇ ಶಿಕ್ಷಣ ವ್ಯವಸ್ಥೆಯ ಸಾಧನೆ/ಸೋಲುಗಳಿಗೆ ಉತ್ತರದಾಯಿಯನ್ನಾಗಿಸಬೇಕು ಎನ್ನುತ್ತದೆ ಈ ವರದಿ.

ನಮ್ಮ ಶಿಕ್ಷಣದಲ್ಲಿ ಏನನ್ನು ಕಲಿಸಬೇಕು? ಕಲಿಸಬೇಕಾದುದನ್ನು ಯಾವ ಭಾಷೆಯಲ್ಲಿ ಕಲಿಸಬೇಕು? ಈ ಪ್ರಶ್ನೆಗಳಿಗೆ ಇಂದಿಗೂ ನಮ್ಮಲ್ಲಿ ಖಚಿತ ಉತ್ತರಗಳಿಲ್ಲ, ಶಿಕ್ಷಣ ಮಾಧ್ಯಮದ ಆಯ್ಕೆಯನ್ನು ಪೋಷಕರಿಗೆ ಬಿಡಿ ಎನ್ನುತ್ತದೆ ಸರ್ವೋಚ್ಚ ನ್ಯಾಯಾಲಯ. ಹಾಗಿದ್ದಲ್ಲಿ ಮಾತೃ ಭಾಷೆಗಳ ಗತಿ ಏನು? ಅವನ್ನು ಅವನತಿ ಹೊಂದಲು ಬಿಡುವುದೆ? ಇದಕ್ಕೆ ಇನ್ನೂ ಸಮರ್ಪಕವಾದ ಉತ್ತರ ಕೇಂದ್ರ ಸರಕಾರದಿಂದ ದೊರೆತಿಲ್ಲ. ಅದು ಇನ್ನೂ ಹಿಂದಿಯೇ ರಾಷ್ಟ್ರ ಭಾಷೆ ಎಂಬ ಗುಂಗಿನಲ್ಲಿದೆ. ಇನ್ನು ಶಿಕ್ಷಣ ಜ್ಞಾನಪ್ರಧಾನವಾಗಿರ ಬೇಕೋ? ವೃತ್ತಿಪ್ರಧಾನವಾಗಿರಬೇಕೋ? ವೃತ್ತಿ ಶಿಕ್ಷಣದ ಮಾಧ್ಯಮ ಯಾವುದಿರಬೇಕು? ಇಂಥ ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳದೆ ಶಿಕ್ಷಣದ ಗುಣಮಟ್ಟ ಮತ್ತು ಸಾಧನೆ ವೈಫಲ್ಯಗಳ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದವಾದೀತು. ಆದಾಗ್ಯೂ ಶಿಕ್ಷಣದ ಗುಣಮಟ್ಟ, ಕಳಪೆ ಗುಣಮಟ್ಟ, ಅದಕ್ಕೆಲ್ಲ ಹೊಣೆಗಾರರು ಯಾರು ಎಂದೆಲ್ಲ ಪದೇಪದೇ ಚರ್ಚೆಗಳಾಗುವುದನ್ನು ನಾವು ಕಾಣುತ್ತಿದ್ದೇವೆ. ಶಿಕ್ಷಣದ ಗುಣಮಟ್ಟ ಕಳಪೆ ಎಂದಾಕ್ಷಣ ಇದಕ್ಕೆಲ್ಲ ಮಾಸ್ತರು/ಪ್ರಾಧ್ಯಾಪಕರೇ ಕಾರಣ ಎನ್ನುವ ಸಿದ್ಧ ಉತ್ತರ ನಮ್ಮಲ್ಲಿದೆ. ಇಂಥ ಉತ್ತರ ಎಷ್ಟರಮಟ್ಟಿಗೆ ವೈಜ್ಞಾನಿಕವಾದುದೋ ತಿಳಿಯದು.
ಭಾರತ ಹಾಗೂ ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಆದ್ಯತೆಗಳಲ್ಲಿ ಶಿಕ್ಷಣಕ್ಕೆ ಕೊನೆಯ ಸ್ಥಾನ. ಹಾಗೆಯೇ ಶಿಕ್ಷಕರ ಸ್ಥಿತಿಗತಿಯೂ. ಭಾರತವೂ ಸೇರಿದಂತೆ ಇಂದು ಅನೇಕ ರಾಷ್ಟ್ರಗಳಲ್ಲಿ ಮಾಸ್ತರು, ಪ್ರಾಧ್ಯಾಪಕರ ಬೋಧನಾ ಕೆಲಸಕಾರ್ಯಗಳು ಸುಗಮಪಥದಲ್ಲಿ ಸಾಗುತ್ತಿಲ್ಲ. ಹಲವಾರು ಅಡೆತಡೆಗಳನ್ನು ಎದುರಿಸುತ್ತಲೇ ಸಾಗಿದೆ ಅವರ ಈ ಪವಿತ್ರ ಕರ್ತವ್ಯ. ಸಂಕೀರ್ಣವಾಗಿರುವ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರು ಒಂದು ಕೊಂಡಿ ಮಾತ್ರ. ಶಿಕ್ಷಣಕ್ಕೆ ಸಂಬಂಧಿಸಿಒದ ಅನೇಕ ನೀತಿನಿರ್ಣಯಗಳು ಅವರ ಕೈಯಲ್ಲಿಲ್ಲ. ಶಿಕ್ಷಣಕ್ಕೆ ಸಂಬಂಧಿಸಿದ ನೀತಿನಿರ್ಣಯಗಳೆಲ್ಲ ಆಳುವ ಪಕ್ಷಗಳ ಧೋರಣೆಗಳಿಗೆ ಅನುಸಾರವಾಗಿಯೇ ಇರುತ್ತವೆ. ಶಿಕ್ಷಣದ ನೀತಿನಿರ್ಣಯಗಳಲ್ಲಿ ದೇಶದ ಭವಿಷ್ಯದ ಜನತೆಯ ಹಿತಾಸಕ್ತಿಗಳಿಗಿಂತ ಆಳುವ ಪಕ್ಷದ ತತ್ವಸಿದ್ಧಾಂತಗಳು, ಪ್ರಣಾಳಿಕೆಗಳೇ ಮೇಲುಗೈ ಪಡೆಯುತ್ತವೆ. ನೀತಿನಿರ್ಣಯ ರೂಪಣೆಯಲ್ಲಿ ಶಿಕ್ಷಣ ತಜ್ಞರ, ಶಿಕ್ಷಕರ ಪಾತ್ರ ಇಲ್ಲವೇ ಇಲ್ಲ. ದಿಲ್ಲಿಯಲ್ಲೋ, ನಾಗ್ಪುರದಲ್ಲೋ ನಮ್ಮ ಮಕ್ಕಳು ಏನು ಓದಬೇಕು-ಏನು ಬೇಡ ಎಂಬುದು ನಿರ್ಧಾರವಾಗುತ್ತದೆ. ಹೀಗಿರುವಾಗ ಶಿಕ್ಷಣ ಪದ್ಧತಿಯ ಯಶಸ್ಸು ಅಯಶಸ್ಸುಗಳಿಗೆಲ್ಲ ಉಪಾಧ್ಯಾಯರನ್ನೇ ಹೊಣೆಗಾರರನ್ನಾಗಿಸುವುದು ನ್ಯಾಯೋಚಿತವಾಗಲಾರದು.

ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿರುವುದು, ತರಗತಿಗಳಿಗೆ ಗೈರುಹಾಜರಾಗುವುದು, ಕಡಿಮೆ ಅಂಕಗಳನ್ನು ಗಳಿಸುವುದು, ಫಲಿತಾಂಶದಲ್ಲಿ ಶೇಕಡಾವಾರು ಇಳಿಕೆ ಇವಕ್ಕೆಲ್ಲ ಸಮಾಜೋಆರ್ಥಿಕ ಕಾರಣಗಳಿವೆ ಎಂಬುದು ಸೂರ್ಯನ ಬೆಳಕಿನಷ್ಟೆ ಸ್ಪಷ್ಟ. ಹೀಗಿರುವಾಗ ಇದಕ್ಕೆ ಮಾಸ್ತರರನ್ನು ಉತ್ತರದಾಯಿಯಾಗಿಸುವುದು ಸಕಾರಣವಾದುದಲ್ಲ.
ಯುನೆಸ್ಕೊ ವರದಿಯಂತೆ, ಶಾಲೆಗಳಿಗೆ ವಿದ್ಯಾರ್ಥಿಗಳ ಗೈರುಹಾಜರಿ, ಟೆಸ್ಟು/ಪರೀಕ್ಷೆಗಳಲ್ಲಿ ಕಡಿಮೆ ಅಂಕಗಳನ್ನು ಗಳಿಸುವುದು, ಓದುಬರಹಗಳಲ್ಲಿ ಹಿಂದುಳಿದಿರುವಿಕೆ, ಅರ್ಧದಲ್ಲಿ ಶಾಲೆ ಬಿಡುವುದು ಮೊದಲಾದವುಗಳಿಗೆಲ್ಲ ಮಾಸ್ತರರನ್ನೇ ದೂರುವ ಪರಿಪಾಠ ಎಲ್ಲೆಡೆ ಇದೆ. ಹಲವಾರು ಕಾರಣಗಳಿಂದಾಗಿ ಇದು ಸರಿಯಲ್ಲ. ಮಾಸ್ತರರನ್ನು ದೂರುವುದರಲ್ಲಿ ಅರ್ಥವಿಲ್ಲ ಎನ್ನುವ ಯುನೆಸ್ಕೊ ವರದಿ ಇಂಥ ನಿರೀಕ್ಷೆ, ಮನೋಭಾವಗಳು, ವಿದ್ಯಾರ್ಥಿಗಳನ್ನು ಟೆಸ್ಟು/ಪರೀಕ್ಷೆಗಳಲ್ಲ್ಲಿ ಹೆಚ್ಚು ಅಂಕಗಳನ್ನು ಗಳಿಸುವುದಕ್ಕೆ ಸಜ್ಜುಗೊಳಿಸುವಂಥ ಬೋಧನಾಕ್ರಮಕ್ಕೆ ಶಿಕ್ಷಕರನ್ನು ದೂಡಬಹುದು. ಬೋಧನೆಯಂಥ ಸಂಕೀರ್ಣ ಪ್ರಕ್ರಿಯೆ ಹಾಗೂ ವಿದ್ಯಾರ್ಥಿಗಳ ಕಲಿಕೆಯನ್ನು ಅಳೆಯಲು ಪರೀಕ್ಷೆಗಳಷ್ಟೇ ಸಾಲದು. ಇಂಥ ಮೌಲ್ಯಮಾಪನಕ್ಕೆ ಪರೀಕ್ಷೆಗಳು ಅಸಮರ್ಪಕ ಮಾನದಂಡವೆನಿಸುತ್ತದೆ. ಟೆಸ್ಟುಗಳು ಮತ್ತು ಪರೀಕ್ಷೆಗಳ ಅಂಕಗಳು ದುರ್ಬಲವರ್ಗದ ವಿದ್ಯಾರ್ಥಿಗಳನ್ನು ಹಿಂದಕ್ಕೆ ತಳ್ಳುತ್ತವೆ.ಅವರ ಪ್ರಗತಿಗೆ ಅಡಚಣೆಯಾಗುತ್ತವೆ. ಅಲ್ಲದೆ ವಿದ್ಯಾರ್ಜನೆಯಲ್ಲಿ ಮುಂದಿರುವ ಮುಂದುವರಿದ ವರ್ಗಗಳ ಶಾಣ್ಯ ವಿದ್ಯಾರ್ಥಿಗಳಿಗೂ ಇದರಿಂದ ದೊರೆಯುವುದು ಶಿಕ್ಷಣ ಕುರಿತಂತೆ ಸೀಮಿತ ಜ್ಞಾನ ಮಾತ್ರ ಎನ್ನುವ ಯುನೆಸ್ಕೊ ವರದಿಯನ್ನು ಭಾರತದಂಥ ರಾಷ್ಟ್ರಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ.

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ತರಗತಿಗಳಿಗೆ ವಿದ್ಯಾರ್ಥಿಗಳ ಗೈರುಹಾಜರಿ ಮತ್ತು ಅರ್ಧದಲ್ಲೇ ವ್ಯಾಸಂಗ ನಿಲ್ಲಿಸುವ ಸಮಸ್ಯೆಯಂತೆಯೇ ಶಿಕ್ಷಕರ ಕೊರತೆ ಮತ್ತು ಶಿಕ್ಷಕರ ಗೈರುಹಾಜರಿಯೂ ಶಾಲಾ ಶಿಕ್ಷಣದ ಒಂದು ಗಂಭೀರ ಸಮಸ್ಯೆಯಾಗಿದೆ. ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಗೆ ಮುಖ್ಯ ಕಾರಣ ಸಕಾಲದಲ್ಲಿ ಉಪಾಧ್ಯಾಯರ ನೇಮಕಾತಿ ನಡೆಯದಿರುವುದು. ನೇಮಕಗೊಂಡ ಶಿಕ್ಷಕರು ಉದ್ಯೋಗಕ್ಕೆ ಹಾಜರಾದರೂ ಕರ್ತವ್ಯ ವಿಮುಖರಾಗುವುದು ಮತ್ತು ಪದೇಪದೇ ಬೋಧನೆಯ ಕೆಲಸದಿಂದ ತಪ್ಪಿಸಿಕೊಳ್ಳುವುದು ಶಾಲಾ ಶಿಕ್ಷಣದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಲಾಗದಿರುವುದಕ್ಕೆ ದೊಡ್ಢ ತೊಡಕಾಗಿದೆ ಎಂಬುದು ಯುನೆಸ್ಕೊ ಗಮನಿಸಿರುವ ಮತ್ತೊಂದು ಮುಖ್ಯ ಸಂಗತಿ.

ಎಷ್ಟೋ ವೇಳೆ ಉಪಾಧ್ಯಾಯರ ಗೈರುಹಾಜರಿ ಅವರ ಹತೋಟಿಯಲ್ಲೇ ಇರುವುದಿಲ್ಲ. ಸ್ವಇಚ್ಛೆಯಿಂದ ಗೈರುಹಾಜರಾಗುವುದಕ್ಕಿಂತ ಅನ್ಯಶಕ್ತಿಗಳ ಪ್ರಭಾವಗಳಿಂದಾಗಿ ಉಪಾಧ್ಯಾಯರು ತಮ್ಮ ಪಾಠಪ್ರವಚನ ಕೆಲಸಗಳಿಂದ ತಪ್ಪಿಸಿಕೊಳ್ಳುವುದು ಆನಿವಾರ್ಯವಾಗುತ್ತದೆ. ಆದ್ದರಿಂದ ಗೈರುಹಾಜರಿಗೆ ಶಿಕ್ಷಕರನ್ನಷ್ಟೇ ದೂಷಿಸುವುದು ನ್ಯಾಯವಲ್ಲ ಎಂದು ವರದಿಯಲ್ಲಿ ಎತ್ತಿಹೇಳಲಾಗಿದೆ. ಹೆಚ್ಚಿನ ಅಧ್ಯಯನಕ್ಕಾಗಿ ರಜೆ ಹಾಕುವುದು, ಶಿಕ್ಷಕರನ್ನು ಬೋಧನೆಯ ಕೆಲಸದಿಂದ ತಪ್ಪಿಸಿ ಇಲಾಖೆಯ ಇತರ ಕೆಲಸಗಳಲ್ಲಿ ತೊಡಗಿಸುವುದು, ಚುನಾವಣೆ, ಜನಗಣತಿ ಮೊದಲಾದ ಕೆಲಸಗಳಿಗೆ ನಿಯೋಜಿಸುವುದು ಶಿಕ್ಷಕರು ಬೋಧನೆಯ ಕೆಲಸದಿಂದ ವಿಮುಖರಾಗಲು, ಗೈರುಹಾಜರಾಗಲು ಮುಖ್ಯ ಕಾರಣವೆನ್ನಲಾಗಿದೆ. ಉಪಾಧ್ಯಾಯರುಗಳನ್ನು ಹೀಗೆ ಅನ್ಯ ಕೆಲಸಗಳಿಗೆ ನಿಯೋಜಿಸಿದಾಗ ಅವರ ಜಾಗಕ್ಕೆ ಬೇರೊಬ್ಬರನ್ನು ನೇಮಿಸುವುದಿಲ್ಲ. ಇದರಿಂದಾಗಿ, ಕೊನೆಗೆ ವಿದ್ಯಾರ್ಥಿಗಳು ಪಾಠಪ್ರವಚನಗಳಿಂದ ವಂಚಿತರಾಗುತ್ತಾರೆ. ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ನಡೆಸಿದ ಒಂದು ಅಧ್ಯಯನದ ಪ್ರಕಾರ ಕರ್ನಾಟಕದ ಶಾಲೆಗಳಲ್ಲಿ ಶಿಕ್ಷಕರ ಗೈರುಹಾಜರಿ ಶೇ.18.5ರಷ್ಟಿದೆಯಂತೆ. ಬೋಧನೆಯ ಕೆಲಸಕ್ಕೆ ಗೈರುಹಾಜರಾಗಿದ್ದ ಈ ಶಿಕ್ಷರರನ್ನು ಬಹುತೇಕ ಅನ್ಯ ಕೆಲಸಗಳಿಗೆ ನಿಯೋಜಿಸಲಾಗಿತ್ತೆಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ಸ್ವಇಚ್ಛೆಯಿಂದ ಬೋಧನೆಯ ಕೆಲಸಕ್ಕೆ ಚಕ್ಕರ್ ಹೊಡೆಯುವ ಉಪಾಧ್ಯಾಯರ ಸಂಖ್ಯೆ ಶೆ.2.5ರಷ್ಟು ಮಾತ್ರ ಎಂದು ಪ್ರತಿಷ್ಠಾನದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಶಿಕ್ಷಣ ಕ್ಷೇತ್ರದಲ್ಲಿ, ವಿಶೇಷವಾಗಿ ಶಾಲಾ ಶಿಕ್ಷಣದಲ್ಲಿ ಶಿಕ್ಷಣ ಪದ್ಧತಿಯ ಯಶಸ್ಸು, ಅಪಯಶಸ್ಸುಗಳ, ಪ್ರಗತಿಯ ಲೆಕ್ಕಹಿಡಿಯುವಾಗ ಇದಕ್ಕೆಲ್ಲ ಉಪಾಧ್ಯಾಯರನ್ನಷ್ಟೇ ಹೊಣೆಗಾರರನ್ನಾಗಿಸಲಾಗದು, ಉತ್ತರದಾಯಿಯನ್ನಾಗಿಸಲಾಗದು. ಹಾಗೆ ಮಾಡುವುದು ಉಪಾಧ್ಯಾಯರಿಗೆ ಅನ್ಯಾಯವೆಸಗಿದಂತೆ ಎನ್ನುವುದು ಯುನೆಸ್ಕೊ ವರದಿಯ ಮುಖ್ಯ ಸಾರಾಂಶ. ಇದು ಒಪ್ಪತಕ್ಕಂಥ ಮಾತೇ. ನಮ್ಮ ಮಕ್ಕಳ ಶಿಕ್ಷಣದಲ್ಲಿ ಪೋಷಕರಿಂದ ಹಿಡಿದು ಸಮಾಜ, ಸರಕಾರ ಎಲ್ಲರ ಪಾಲೂ ಇದೆ ಎಂಬುದರಲ್ಲಿ ಎರಡು ಅಭಿಪ್ರಾಯವಿರಲಾರದು. ಭಾಷೆ-ಸಂಸ್ಕೃತಿಗಳನ್ನು ಕಾಯ್ದುಕೊಳ್ಳುವುದು, ಪೋಷಕರ ಇಚ್ಛೆ-ಅನಿಚ್ಛೆ, ಕಾಲದ ಬೇಡಿಕೆ ಹಾಗೂ ಒತ್ತಡಗಳು ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ಖಚಿತವಾದ ಶಿಕ್ಷಣ ನೀತಿಯೊಂದನ್ನು ರೂಪಿಸುವುದು ಸರಕಾರದ ಕರ್ತವ್ಯ ಹಾಗೂ ಜವಾಬ್ದಾರಿ. ಆದರೆ ಇಂಥದೊಂದು ಸ್ಪಷ್ಟವಾದ ಶಿಕ್ಷಣ ನೀತಿ ಎಂಬುದು ಸ್ವಾತಂತ್ರ್ಯಾನಂತರದ ಕಾಲದಲ್ಲಿ ಒಂದು ಮರೀಚಿಕೆಯೇ ಆಗಿದೆ. ಕೇಂದ್ರದಲ್ಲಿ, ರಾಜ್ಯಗಳಲ್ಲಿ ಒಂದೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಒಂದೊಂದು ಬಗೆಯ ನೀತಿಯನ್ನು ನಮ್ಮ ಮಕ್ಕಳ ಮೇಲೆ ಹೇರಲಾಗುತ್ತಿದೆ. ಹೀಗಾಗಿ ಸರಕಾರಿ ಶಿಕ್ಷಣ ಪದ್ಧತಿಗೊಂದು ಸ್ಪಷ್ಟ ಗೊತ್ತುಗುರಿ ಇಲ್ಲದಂತಾಗಿದೆ. ಈಗಿನ ಕೇಂದ್ರ ಸರಕಾರದ ಶಿಕ್ಷಣ ನೀತಿಯನ್ನಂತೂ ನಾಗ್ಪುರದಲ್ಲಿ ರೂಪಿಸಲಾಗುತ್ತಿದೆ. ಖಾಸಗಿ ಶಿಕ್ಷಣ ರಂಗದ್ದು ಬೇರೆಯದೇ ಮಾತು. ಅದು ಉಳ್ಳವರ ನಸೀಬು.

ನಮ್ಮ ಮಕ್ಕಳ ಶಿಕ್ಷಣದಲ್ಲಿ ಪೋಷಕರಿಂದ ಹಿಡಿದು ಸಮಾಜ, ಸರಕಾರ ಎಲ್ಲರ ಪಾಲೂ ಇದೆ ಎಂಬುದರಲ್ಲಿ ಎರಡು ಅಭಿಪ್ರಾಯವಿರಲಾರದು. ಭಾಷೆ-ಸಂಸ್ಕೃತಿಗಳನ್ನು ಕಾಯ್ದುಕೊಳ್ಳುವುದು, ಪೋಷಕರ ಇಚ್ಛೆ-ಅನಿಚ್ಛೆ, ಕಾಲದ ಬೇಡಿಕೆ ಹಾಗೂ ಒತ್ತಡಗಳು ಇವೆಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ಖಚಿತವಾದ ಶಿಕ್ಷಣ ನೀತಿಯೊಂದನ್ನು ರೂಪಿಸುವುದು ಸರಕಾರದ ಕರ್ತವ್ಯ ಹಾಗೂ ಜವಾಬ್ದಾರಿ. ಆದರೆ ಇಂಥದೊಂದು ಸ್ಪಷ್ಟವಾದ ಶಿಕ್ಷಣ ನೀತಿ ಎಂಬುದು ಸ್ವಾತಂತ್ರ್ಯಾನಂತರದ ಕಾಲದಲ್ಲಿ ಒಂದು ಮರೀಚಿಕೆಯೇ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News