ಶಿಷ್ಠ ಸಾಹಿತ್ಯಕ್ಕೆ ಜನಪದ ತಾಯಿ ಬೇರು: ಶ್ರೀಕಂಠ ಕೂಡಿಗೆ

Update: 2017-11-12 14:02 GMT

ಚಿಕ್ಕಮಗಳೂರು, ನ.12:  ಶಿಷ್ಠ ಸಾಹಿತ್ಯವು ಸಾವಿರಾರು ಕವಲುಗಳಲ್ಲಿ ಇಂದು ನಿರಂತರವಾಗಿ ಹರಿಯುತ್ತಿರುವುದರ ಮೂಲ. ನಮ್ಮ ಗ್ರಾಮೀಣ ಮುಗ್ಧ ಜನರ ಕಟ್ಟಿಕೊಂಡ ಜಾನಪದದಲ್ಲಿದೆ ಎಂದು ಖ್ಯಾತ ಜಾನಪದ ತಜ್ಞ ಡಾ.ಶ್ರೀಕಂಠ ಕೂಡಿಗೆ ಹೇಳಿದರು.

ಅವರು ಭಾನುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಓಣಿಮನೆ ಪ್ರಕಾಶನದ ವತಿಯಿಂದ ಪ್ರಕಟಿಸಲಾದ ಮೇಕನಗದ್ದೆ ಲಕ್ಷ್ಮಣಗೌಡರ 3 ಕೃತಿಗಳ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ಜಾಗತೀಕರಣದ ಸಂದರ್ಭದಲ್ಲಿ ಜಾನಪದ ಕ್ಷೇತ್ರ ಕಾರ್ಯ, ಸಂಶೋಧನೆ ಅಧ್ಯಯನಗಳ ಮೂಸೆಯಲ್ಲಿ ಎರಕಗೊಂಡು ಜಾನಪದ ಸಾರವನ್ನು ರಸವತ್ತಾಗಿ ಹಿಡಿದಿಟ್ಟು ಕೊಂಡಿರುವ ಕೃತಿ ಎಂದು ಲಕ್ಷ್ಮಣಗೌಡರ ಮರೆತು ಹೋದ ಮಲೆನಾಡು ಚಿತ್ರಗಳನ್ನು ಕುರಿತು ಉಲ್ಲೇಖಿಸಿದರು.

ಪ್ರಧಾನ ಉಪನ್ಯಾಸಕರಾಗಿ ಡಾ. ಬಸವರಾಜ ನೆಲ್ಲಿಸರ ಮಾತನಾಡಿ, ನಾಗರೀಕತೆಯ ಓಟದಲ್ಲಿ ಸಿಲುಕಿ, ನಮ್ಮ ಬೇರುಗಳ ಮೂಲವನ್ನು ಗಟ್ಟಿಗೊಳ್ಳಿಸಿಕೊಳ್ಳದಿದ್ದರೆ ಮುಂದಿನ ಬದುಕು ಅತಂತ್ರವಾಗುತ್ತದೆ. ಅದನ್ನೆಲ್ಲ ಮೀರಿ ನಿಲ್ಲಬಲ್ಲ ಶಕ್ತಿ ಜಾನಪದಕ್ಕಿದೆ ಅದನ್ನು ಕಟ್ಟಿಕೊಡುವ ಕೆಲಸವನ್ನು ಲಕ್ಷ್ಮಣಗೌಡರು ಮಾಡಿದ್ದಾರೆ ಎಂದರು.

ಶತಾಯುಷಿ ಎಂ.ಆರ್.ಸಣ್ಣಸಿದ್ದೇಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಓಣಿಮನೆ ಪ್ರಕಾಶನದ ಲಾಂಛನವನ್ನು  ಮೇಕನಗದ್ದೆಯ ಸಕಲೇಶಪುರ ವಾಸಿ ಎಂ.ಪಿ.ಲಕ್ಷ್ಮಣ ಅನಾವರಣಗೊಳಿಸಿದರು. ಡಾ.ಜೆ.ಪಿ.ಕೃಷ್ಣೇಗೌಡ ಸೃಷ್ಟಿ ಚತುರನ ವಚನಗಳು ಪುಸ್ತಕವನ್ನು, ಚಿಪ್ರಗುತ್ತಿ ಪ್ರಶಾಂತ ದೇವವೃಂದ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು. ‘ಅಕ್ಕ’ ಸಂಸ್ಥಾಪಕರು ಹಾಗೂ ಈ-ಕವಿ ಸಂಚಾಲಕ ವಿ.ಎಂ.ಕುಮಾರಸ್ವಾಮಿ ಮರೆತು ಹೋದ ಮಲೆಮಾಡಿನ ಚಿತ್ರಗಳು ಕೃತಿಯನ್ನು ಬಿಡುಗಡೆ ಮಾಡಿದರು.

ಬಣಕಲ್ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಯು.ಕೆ.ಕೃಷ್ಣೇಗೌಡ, ಹಾಸನದ ನಿವೃತ್ತ ಶಿಕ್ಷಕ ಸಿ.ಎನ್.ಪರಮೇಶ್ವರ, ಬೆಂಗಳೂರಿನ ವಿಮಲಶಂಕರ ವಿದ್ಯಾಸಂಸ್ಥೆ ಪ್ರಾಂಶುಪಾಲ ಸಿದ್ರುಬನ ಡಾ.ಡಿ.ಸಿ.ರವಿಕುಮಾರ, ಹಾವೇರಿಯಲ್ಲಿ ಬೇಕರಿ ಉದ್ಯಮ ಸ್ಥಾಪಿಸಿರುವ ತೋರಣಮಾವು ಮೋಹನ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಅಮ್ರಿನ್ ತಾಜ್‍ರನ್ನು ಸನ್ಮಾನಿಸಲಾಯಿತು. 

ಬಕ್ಕಿ ಮಂಜು ತಂಡದವರಿಂದ ಮೇಕನಗದ್ದೆ ಲಕ್ಷ್ಮಣಗೌಡರ ಗೀತೆಗಳನ್ನು ಅತ್ಯಂತ ಸುಶ್ರಾವ್ಯವಾಗಿ ಜಾನಪದ ಶೈಲಿಯಲ್ಲಿ ಹಾಡಿ ರಂಜಿಸಿದರು. ಶಿವವೂಗ್ಗದ ನ್ಯಾಮತಿಯವರಾದ ಭಾವನ ಭರತ ನಾಟ್ಯ ದಲ್ಲಿ ಕಾಣಿಸಿಕೊಂಡು ರಸದೌತಣ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಜೆವಿಎಸ್ ಶಾಲೆಯ ಶಿಕ್ಷಕಿ ಶಾಂತ ನಡೆಸಿಕೊಟ್ಟರು. ಮೇಕನಗದ್ದೆ ಲಕ್ಷ್ಮಣಗೌಡರು ಸ್ವಾಗತಿಸಿ, ಆಶಾಕಿರಣ ಅಂಧ ಮಕ್ಕಳ ಶಾಲೆಯ ಶಿಕ್ಷಕ ಲಕ್ಷ್ಮಣಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News