ನದಿಯಲ್ಲಿ ದೋಣಿ ಮುಳುಗಿ ಕನಿಷ್ಠ 11 ಮಂದಿ ಮೃತ್ಯು

Update: 2017-11-12 17:36 GMT

 ವಿಜಯವಾಡ, ನ.12: 38 ಪ್ರಯಾಣಿಕರನ್ನು ಸಾಗಿಸುತ್ತಿದ್ದ ದೋಣಿಯೊಂದು ನದಿಯಲ್ಲಿ ಮುಳುಗಿದ ದುರಂತ ಘಟನೆಯಲ್ಲಿ 7 ಮಹಿಳೆಯರೂ ಸೇರಿದಂತೆ ಕನಿಷ್ಠ 11 ಮಂದಿ ಮೃತಪಟ್ಟಿದ್ದಾರೆ. ಇನ್ನೂ ಹಲವು ಮಂದಿ ನೀರಿನಲ್ಲಿ ಮುಳುಗಿರುವ ಶಂಕೆಯಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ದೋಣಿಯಲ್ಲಿ ಸಾಗಿಸಿರುವುದು ದುರಂತಕ್ಕೆ ಕಾರಣ ಎನ್ನಲಾಗಿದೆ.

         ಆಂಧ್ರಪ್ರದೇಶದ ವಿಜಯವಾಡದ ಹೊರವಲಯದಲ್ಲಿರುವ ಇಬ್ರಾಹಿಂಪಟ್ಣಂ ಎಂಬಲ್ಲಿ ಕೃಷ್ಣಾ ನದಿಯಲ್ಲಿ ರವಿವಾರ ಸಂಜೆ ವೇಳೆ ಈ ಘಟನೆ ನಡೆದಿದೆ. ಕಾರ್ತಿಕ ಮಾಸ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ 38 ಪ್ರಯಾಣಿಕರನ್ನು ಭವಾನಿ ದ್ವೀಪದಿಂದ ಪವಿತ್ರ ಸಂಗಮ ಸ್ಥಳಕ್ಕೆ ಸಾಗಿಸುತ್ತಿದ್ದ ದೋಣಿ ನದಿಯಲ್ಲಿ ಮುಳುಗಿದೆ. ಲೈಫ್ ಜಾಕೆಟ್ ತೊಟ್ಟಿದ್ದ 20 ಪ್ರಯಾಣಿಕರನ್ನು ಸ್ಥಳೀಯ ಮೀನುಗಾರರು ಹಾಗೂ ತರಬೇತುಪಡೆದ ಈಜುಗಾರರ ನೆರವಿನಿಂದ ಸುರಕ್ಷಿತವಾಗಿ ದಡ ಸೇರಿಸಲಾಗಿದೆ. ಐವರ ದೇಹಗಳನ್ನು ನದಿಯಲ್ಲಿ ಪತ್ತೆಮಾಡಲಾಗಿದೆ. ಕತ್ತಲೆಯಾದಂತೆ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗಿದೆ ಎಂದು ಮೂಲಗಳು ತಿಳಿಸಿವೆ.

ಭವಾನಿ ದ್ವೀಪಕ್ಕೆ ಪ್ರತೀದಿನ ಪ್ರವಾಸಿಗರನ್ನು ದೋಣಿಗಳ ಮೂಲಕ ಕರೆದೊಯ್ಯಲು ಖಾಸಗಿ ಏಜೆನ್ಸಿಯವರಿಗೆ ಆಂಧ್ರಪ್ರದೇಶದ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡಿದೆ. ಆದರೆ ಬಹುತೇಕ ದೋಣಿಗಳಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸಲಾಗುತ್ತದೆ ಹಾಗೂ ಹೆಚ್ಚಿನ ದೋಣಿಗಳಲ್ಲಿ ಲೈಫ್ ಜಾಕೆಟ್‌ನ ವ್ಯವಸ್ಥೆ ಇರುವುದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ನೆರವು ಪಡೆದು ರಕ್ಷಣಾ ಕಾರ್ಯಾಚರಣೆ ತೀವ್ರಗೊಳಿಸುವಂತೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News