ತುರ್ತು ಸೇವೆ ಸಿಗದೆ ಪರದಾಡಿದ ಗರ್ಭಿಣಿ
ಬಣಕಲ್, ನ.12: ತುಂಬು ಗರ್ಭಿಣಿ ಮಹಿಳೆಯನ್ನು ಹೆರಿಗೆಗೆಂದು ಬಣಕಲ್‌ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಿವಾರ ಕರೆ ತಂದ ಬಡಕುಟುಂಬವು ಆಸ್ಪತ್ರೆ ಯಲ್ಲಿ ಸಕಾಲದಲ್ಲಿ ವೈದ್ಯರಿಲ್ಲದೆ, ತುರ್ತು ಸೇವೆಯೂ ಸಿಗದೆ ಪರದಾಡಿದ ಘಟನೆ ನಡೆದಿದೆ.
ದಾಸರಹಳ್ಳಿ ಎಸ್ಟೇಟ್‌ವೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿರುವ ಕೊಪ್ಪಳ ಮೂಲದ ಮಂಜುನಾಥ್ ಎಂಬವರ ಪತ್ನಿ ತುಂಬು ಗರ್ಭಿಣಿ ಅನುಷಾ ಹೆರಿಗೆಗಾಗಿ ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. 1ಗಂಟೆಗೂ ಹೆಚ್ಚುಕಾಲ ವೈದ್ಯರಿಗಾಗಿ ಕಾದ ಬಳಿಕ ಸಿಬ್ಬಂದಿಯೊಬ್ಬರು ವೈದ್ಯರು ರಜೆಯಲ್ಲಿರುವ ಮಾಹಿತಿ ನೀಡಿದರು. ಈ ವೇಳೆ ಸ್ಥಳದಲ್ಲಿದ್ದ ಜೆಡಿಎಸ್ ತಾಲೂಕು ಕಾರ್ಯದರ್ಶಿ ಇಮ್ರಾನ್ 108ಕ್ಕೆ ಕರೆ ಮಾಡಿದ್ದು, ಮೂಡಿಗೆರೆಯ ಆ್ಯಂಬುಲೆನ್ಸ್ ಕೆಟ್ಟಿದೆ. ಕಳಸ ಅಥವಾ ಸಕಲೇಶಪುರದಿಂದ ಆ್ಯಂಬುಲೆನ್ಸ್ ಕಳಿಸುವುದಾಗಿ ತಿಳಿಸಿದ್ದಾರೆ. ಅಲ್ಲಿಂದ ಆ್ಯಂಬುಲೆನ್ಸ್ ಬರಲು ತಡವಾಗು ವುದನ್ನು ಮನಗಂಡ ಇಮ್ರಾನ್ ಖಾಸಗಿ ಆ್ಯಂಬುಲೆನ್ಸ್ ತರಿಸಿ ಮೂಡಿಗೆರೆ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ಬಗ್ಗೆ ಇಮ್ರಾನ್ ಮಾದ್ಯಮಗಳೊಂದಿಗೆ ಮಾತನಾಡಿ, ಬಣಕಲ್‌ನಲ್ಲಿ ತುರ್ತು ಸಮಯದಲ್ಲಿ ಸಮರ್ಪಕ ಆರೋಗ್ಯ ಸೇವೆ ದೊರಕುತ್ತಿಲ್ಲ. ಒಬ್ಬರು ವೈದ್ಯರು ಮತ್ತು ದಾದಿಯರು ಆಸ್ಪತ್ರೆಯಲ್ಲಿ ಕಡ್ಡಾಯವಾಗಿ ಕಾರ್ಯನಿರ್ವಹಿಸಬೇಕು. ವೈದ್ಯರು ರಜೆಯಲ್ಲಿದ್ದರೆ ಪರ್ಯಾಯ ವೈದ್ಯರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ನೇಮಿಸಬೇಕು. ಬಣಕಲ್ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರ ವನ್ನಾಗಿ ಮೇಲ್ದರ್ಜೆಗೆ ಏರಿಸುವಂತೆ ಹಲವು ಬಾರಿ ಆರೋಗ್ಯಾಧಿಕಾರಿಗೆ ಮನವಿ ಮಾಡಿದರೂ ಕ್ರಮ ಕೈಗೊಂಡಿಲ್ಲ. ತಾಲೂಕು ಕೇಂದ್ರದಲ್ಲಿ ಎರಡು 108 ಆ್ಯಂಬುಲೆನ್ಸ್‌ಗಳಿದ್ದರೂ ಅವು ದುರಸ್ತಿಯಲ್ಲಿರುವುದಾಗಿ 108ಗೆ ಕರೆ ಮಾಡಿದರೆ ತಿಳಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೂಡಿಗೆರೆಯಲ್ಲಿ ಸರಕಾರಿ ಆ್ಯಂಬುಲೆನ್ಸ್ ಕಾರ್ಯ ನಿರ್ವಹಿಸುತ್ತಿದ್ದರೂ ಕೆಲ ಸರಕಾರಿ ಆ್ಯಂಬುಲೆನ್ಸ್ ಚಾಲಕರು ಸ್ವಂತ ಆ್ಯಂಬುಲೆನ್ಸ್ ಹೊಂದಿದ್ದು, ಸರಕಾರಿ ಆ್ಯಂಬುಲೆನ್ಸ್ ಸುಸ್ಥಿಯಲ್ಲಿದ್ದರೂ ಬಾಡಿಗೆಯ ದುರಾಸೆಯಿಂದ ಸರಕಾರಿ ಆ್ಯಂಬುಲೆನ್ಸ್ ದುರಸ್ತಿ ಯಲ್ಲಿರುವುದಾಗಿ ತಿಳಿಸಿ ಅವರ ಸ್ವಂತ ಆ್ಯಂಬುಲೆನ್ಸ್ ಬಳಸುತ್ತಾರೆ ಎಂದು ಸ್ಥಳೀಯರು ದೂರಿದ್ದಾರೆ.
ಈ ಸಮಯದಲ್ಲಿ ಗ್ರಾಮಸ್ಥರಾದ ಅರುಣ ಪೂಜಾರಿ, ರಶೀದ್ ಬಣಕಲ್, ಅಶೋಕ್ ಮತ್ತಿಕಟ್ಟೆ, ಅಝೀಝ್ ಮತ್ತಿತರಿದ್ದರು.
ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 24 ತಾಸು ಕಾರ್ಯನಿರ್ವಹಿಸುವ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮಾಡಬೇಕು. ಈ ಬಗ್ಗೆ ಆರೋಗ್ಯ ಇಲಾಖೆಗೆ ಮನವಿ ಸಲ್ಲಿಸಿ ಸಮರ್ಪಕ ಆರೋಗ್ಯಸೇವೆ ನೀಡುವಂತೆ ಒತ್ತಾಯಿಸಿ ನ.14ರಂದು ಮಂಗಳವಾರ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಪ್ರತಿಟನೆ ನಡೆಸಲಾಗುವುದು ಎಂದು ಸ್ಥಳೀಯರು ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಮೂಡಿಗೆರೆಯಲ್ಲಿ 2 ಆ್ಯಂಬುಲೆನ್ಸ್ ಇದೆ. ಒಂದು ದುರಸ್ತಿಯಲ್ಲಿದ್ದರೂ ಮತ್ತೊಂದು ಕಳಿಸಿಕೊಡಬೇಕು. ಈ ಘಟನೆ ನನ್ನ ಗಮನಕ್ಕೆ ಬಂದಿದೆ. ಬಣಕಲ್‌ನಲ್ಲಿ ಇಬ್ಬರು ವೈದ್ಯರಿದ್ದು ಒಬ್ಬ ವೈದ್ಯರಾದರೂ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ತಾಲೂಕು ಆರೋಗ್ಯ ವೈದ್ಯಾಧಿಕಾರಿಗಳಿಂದ ವರದಿ ತರಿಸಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
ಮಲ್ಲಿಕಾರ್ಜುನ, ಜಿಲ್ಲಾ ಆರೋಗ್ಯ ನಿರೀಕ್ಷಕರು.