×
Ad

ನಿಷೇದಾಜ್ಞೆ ತೆರವುಗೊಳಿಸಲು ಶಾಸಕ ಪುಟ್ಟಣ್ಣಯ್ಯ ಒತ್ತಾಯ

Update: 2017-11-12 22:26 IST

ಮಂಡ್ಯ, ನ.12:  ಬಡ ಕೂಲಿ ಕಾರ್ಮಿಕರ ರಕ್ಷಣೆ ದೃಷ್ಟಿಯಿಂದ ಕಲ್ಲುಗಣಿಗಾರಿಕೆ ಸಂಬಂಧ ತಾಲೂಕಿನ ಬೇಬಿ ಗ್ರಾಮ ಸುತ್ತಮುತ್ತ ವಿಧಿಸಿರುವ 144 ಸೆಕ್ಷನ್ ನಿಷೇಧಾಜ್ಞೆಯನ್ನು ಸಡಿಲಗೊಳಿಸಬೇಕು ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಒತ್ತಾಯಿಸಿದ್ದಾರೆ.

ರವಿವಾರ ಪಾಂಡವಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಒಂದು ತಿಂಗಳಿನಿಂದ ಈ ಭಾಗದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿತ್ತು. ಈಗ ಮತ್ತೊಂದು ತಿಂಗಳಿಗೆ ವಿಸ್ತರಣೆಯಾಗಿದೆ. ಇದರಿಂದ ಬಡಕಾರ್ಮಿಕರು ಬೀದಿಪಾಲಾಗುತ್ತಾರೆಂದು ಆಂತಕ ವ್ಯಕ್ತಪಡಿಸಿದರು.

ನಿಷೇಧಾಜ್ಞೆ ಸಡಿಲ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪರವರ ಜತೆ ಮಾತುಕತೆ ನಡೆಸಿದ್ದೇನೆ.  ಈ ಸಂಬಂಧ ಜಿಲ್ಲಾಧಿಕಾರಿಗೂ ಪತ್ರ ಬರೆಯಲಾಗುವುದು. ನಿಷೇದಾಜ್ಞೆ ನಡೆಸಿ ಗಣಿಗಾರಿಕೆ ಪ್ರದೇಶದಲ್ಲಿ 1 ತಿಂಗಳು ಸರ್ವೆ ಕಾರ್ಯ ನಡೆಸಿರುವುದು ಸರಿ. ಆದರೆ, ಮತ್ತೊಂದು ತಿಂಗಳಿಗೆ ವಿಸ್ತರಿಸಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಗಣಿಗಾರಿಕೆಗೆ ಬಗ್ಗೆ ಸೂಕ್ತ ನೀತಿ ರಚನೆ ಮಾಡಿ, ರಾಜಧನ ನಿಗಧಿ ಮಾಡಿಬೇಕು. ಜತೆಗೆ ಅನಾನುಕೂಲವಾಗುವ ಗಣಿಗಳನ್ನು ಸುರಕ್ಷಿತ ಪ್ರದೇಶಕ್ಕೆ ವರ್ಗಾಹಿಸಬೇಕು. ಗ್ರಾಮದ ಜನತೆಯ ಹಿತಕ್ಕಾಗಿ ಗಣಿ ಮಾಲೀಕರು ಹೆಚ್ಚು ಪ್ರಮಾಣದ ಸ್ಫೋಟಿಸಬಾರದು. ರಾತ್ರಿ ವೇಳೆ ಕ್ರಷಿಂಗ್ ನಿಲ್ಲಿಸಬೇಕು ಎಂದು ಅವರು ಸಲಹೆ ನೀಡಿದರು.

ಪಾಂಡವಪುರ ಉಪವಿಭಾಗಾಧಿಕಾರಿ ಆರ್.ಯಶೋಧ ಅವರು ದಕ್ಷತೆಯಿಂದ ಕೆಲಸ ಮಾಡುತ್ತಿಲ್ಲ. ಅವರೊಬ್ಬ ನಾಲಾಯಕ್ ಅಧಿಕಾರಿಯಾಗಿದ್ದಾರೆ. ತಮ್ಮ ಕಚೇರಿಗೆ ಹೋಗುವ ಜನಸಾಮಾನ್ಯರೊಂದಿಗೆ ಸ್ಪಂದಿಸುತ್ತಿಲ್ಲ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಮಾತನಾಡುತ್ತೇನೆ ಎಂದು ಪುಟ್ಟಣ್ಣಯ್ಯ ನುಡಿದರು.
ಕಾವೇರಿ ನೀರಾವರಿ ನಿಗಮದ ಇಇ ಬಸವರಾಜೇಗೌಡ ಎರಡು ವರ್ಷದ ನನ್ನ ಕಣ್ಣಿಗೆ ಬೀಳದೆ ನಾಪತ್ತೆಯಾಗಿದ್ದಾರೆ. ಸುಮಾರು 200ರಿಂದ 300 ಕೋಟಿ ರೂ. ಸಿಡಿಎಸ್ ನಾಲೆಯ ಆಧುನೀಕರಣ ಕಾಮಗಾರಿ  ಪರಿಶೀಲನೆ ನಡೆಸಿಲ್ಲ. ನಾಲಾ ಅಭಿವೃದ್ಧಿ ಕಾಮಗಾರಿ ಮಾಡುತ್ತಿರುವ ಅಮೃತ್ ಕನ್‍ಸ್ಟ್ರಕ್ಷನ್ ದೊಡ್ಡ ಭ್ರಷ್ಟಚಾರ ನಡೆಸುತ್ತಿದೆ. ಈ ಬಗ್ಗೆ ದಾಖಲೆ ಸಮೇತ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದರು.

ಜಿಪಂ ಮಾಜಿ ಸದಸ್ಯ ಎ.ಎಲ್.ಕೆಂಪೂಗೌಡ, ರವಿ ಬೋಜೇಗೌಡ, ಹೊನಗಾನಹಳ್ಳಿ ಕಿಟ್ಟಿ, ರಾಗಿಮುದ್ದನಹಳ್ಳಿ ಶ್ಯಾಮ್, ಚಿನಕುರಳಿ ಯಜಮಾನ್ ತಮ್ಮಣ್ಣ, ಎಚ್.ಎನ್.ವಿಜಯ್‍ಕುಮಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News