×
Ad

ನ. 17ರಂದು ‘ನನ್ ಮಗಳೇ ಹಿರೋಯಿನ್’ ಚಿತ್ರ ತೆರೆಗೆ

Update: 2017-11-12 22:44 IST

ದಾವಣಗೆರೆ,ನ.12:ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್, ಬಿ.ಸಿ. ಪಾಟೀಲ್ ಅಭಿನಯದ ಸಂಪೂರ್ಣ ಹಾಸ್ಯ ಕಥಾಹಂದರ ಹೊಂದಿರುವ ‘ನನ್ ಮಗಳೇ ಹಿರೋಯಿನ್’ ಚಿತ್ರ ನ. 17ರಂದು ರಾಜ್ಯಾದ್ಯಂತ ತೆರೆಕಾಣಲಿದೆ ಎಂದು ಚಿತ್ರ ನಿರ್ದೇಶಕ ಬಾಹುಬಲಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ   ಮಾತನಾಡಿದ ಅವರು, ಶ್ರೀಕಾಲಭೈರೇಶ್ವರ ಕಂಬೈನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಎನ್.ಜಿ. ಮೋಹನ್ ಕುಮಾರ್ ಹಾಗೂ ಪಟೇಲ್ ಆರ್ ಅನ್ನದಾನಪ್ಪ ನಿರ್ಮಾಪಕರಾಗಿದ್ದಾರೆ. ಬೆಂಗಳೂರು, ಮಂಗಳೂರು, ಉಡುಪಿ, ಕುಂದಾಪುರ, ರಾಜಸ್ತಾನ ಮತ್ತಿತರ ಭಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು, ವಿಶೇಷವಾಗಿ 'ನನ್ ಮಗಳೇ ಹಿರೋಯಿನ್' ಚಿತ್ರಕ್ಕಾಗಿ ಸಾರ್ವಜನಿಕರಿಂದ ಮಕ್ಕಳೊಂದಿಗೆ ಪೋಷಕರ ಫೋಟೋಗಳನ್ನು ಆಹ್ವಾನಿಸಲಾಗಿತ್ತು. ಸುಮಾರು 25 ಸಾವಿರ ಚಿತ್ರಗಳು ಬಂದಿದ್ದವು. ಅದರಲ್ಲಿ ಸುಮಾರು 18 ಸಾವಿರ ಚಿತ್ರಗಳನ್ನು ಆಯ್ದು ನಮ್ಮ ನನ್ ಮಗಳೇ ಹಿರೋಯಿನ್ ಚಿತ್ರದಲ್ಲಿ ಅಳವಡಿಕೆ ಮಾಡಲಾಗಿದೆ ಎಂದರು.

ಸಿನಿಮಾ ನಿರ್ದೇಶಿಸಬೇಕೆಂಬ ಕನಸು ಹೊತ್ತ ಯುವನಿರ್ದೇಶಕನೊಬ್ಬ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ಎಂತಹ ಪರಿಸ್ಥಿತಿ, ಸವಾಲು ಎದುರಿಸುತ್ತಾನೆ ಹಾಗೂ ಆ ಯುವ ನಿರ್ದೇಶಕ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾನೆ? ಎಂಬ ಬಗ್ಗೆ ಹಾಸ್ಯದ ಹಿನ್ನಲೆಯಲ್ಲಿ ಚಿತ್ರ ನಿರೂಪಿಸಲಾಗಿದ್ದು, ಚಿತ್ರದಲ್ಲಿ 5 ಹಾಡುಗಳಿವೆ ಎಂದು ಅವರು ವಿವರಿಸಿದರು.

ನಟ ನಾಯಕ ಸಂಚಾರಿ ವಿಜಯ್ ಮಾತನಾಡಿ, ನನ್ ಮಗಳೇ ಹಿರೋಯಿನ್ ಚಿತ್ರ ಸುಮಾರು 122 ಚಿತ್ರಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಇದೊಂದು ಸದಭಿರುಚಿಯ ಚಿತ್ರ. ನಟರಾದ ಬಿ.ಸಿ. ಪಾಟೀಲ್, ಬುಲೆಟ್ ಪ್ರಕಾಶ್, ವಿಜಯ್ ಚಂಡೂರು, ಗಡ್ಡಪ್ಪ, ತಬಲನಾಣಿ ಮತ್ತಿತರರ ಬೃಹತ್ ತಾರಬಳಗವೇ ಚಿತ್ರದಲ್ಲಿದೆ ಎಂದರು.

ನಾಯಕಿಯರಾದ ದೀಪಿಕ, ಅಮೃತಾರಾವ್ ಮಾತನಾಡಿದರು. ಗೋಷ್ಠಿಯಲ್ಲಿ ಎನ್.ಜಿ. ಮೋಹನ್, ಪಟೇಲ್ ಆರ್. ಅನ್ನದಾನಪ್ಪ, ಗುಂಡ್ಲುಪೇಟೆ ಸುರೇಶ್ ಮತ್ತಿತರರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News