ಮಕ್ಕಳಿಗೆ ಪೌಷ್ಠಿಕ ಆಹಾರ: ರಾಜ್ಯಗಳಿಗೆ ಮುಕ್ತ ಅವಕಾಶ ನೀಡಿದ ಕೇಂದ್ರ ಸರಕಾರ

Update: 2017-11-12 17:35 GMT

ಹೊಸದಿಲ್ಲಿ, ನ.12: ತನ್ನ ಪೌಷ್ಠಿಕ ಕಾರ್ಯನೀತಿಯಲ್ಲಿ ಪ್ರಮುಖ ಬದಲಾವಣೆ ಮಾಡಿರುವ ಕೇಂದ್ರ ಸರಕಾರ, ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬಳಕೆಗೆ ಸಿದ್ಧವಾಗಿರುವ ಪೌಷ್ಠಿಕ ಆಹಾರ ಒದಗಿಸುವ ಕುರಿತು ರಾಜ್ಯಸರಕಾರ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದೆ.

ಬಳಕೆಗೆ ಸಿದ್ಧವಾಗಿರುವ ಪೌಷ್ಠಿಕ ಆಹಾರವು ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಐದು ವರ್ಷದೊಳಗಿನ ಮಕ್ಕಳಿಗೆ ನೀಡಲಾಗುವ ಪುಷ್ಠಿದಾಯಕ ಜಲಾಹಾರವಾಗಿದೆ.

    ಬಳಕೆಗೆ ಸಿದ್ಧವಾಗಿರುವ ಪೌಷ್ಠಿಕ ಆಹಾರ(ಆರ್‌ಯುಟಿಎಫ್)ವನ್ನು ಮಕ್ಕಳಿಗೆ ನೀಡುವುದನ್ನು ವಿರೋಧಿಸಿ ಮುಂಬೈ ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯ ಹಿನ್ನೆಲೆಯಲ್ಲಿ, ಮಹಾರಾಷ್ಟ್ರ ಸರಕಾರ ಇಂತಹ ಆಹಾರವಸ್ತುಗಳ ಪೂರೈಕೆಯನ್ನು ಅಮಾನತುಗೊಳಿಸಿತ್ತು. ಕೇಂದ್ರ ಸರಕಾರದ ಅನುಮತಿ ದೊರಕುವವರೆಗೆ ಇಂತಹ ಆಹಾರವಸ್ತುಗಳ ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲು ನಿರ್ಧರಿಸಿರುವುದಾಗಿ ಮಹಾರಾಷ್ಟ್ರ ಸರಕಾರ ಕಳೆದ ಸೆಪ್ಟೆಂಬರ್‌ನಲ್ಲಿ ಹೈಕೋರ್ಟ್‌ನಲ್ಲಿ ಹೇಳಿಕೆ ನೀಡಿತ್ತು. ಇದೀಗ ಕೇಂದ್ರ ಸರಕಾರ ತನ್ನ ಕಾರ್ಯನೀತಿಯಲ್ಲಿ ಬದಲಾವಣೆ ತಂದಿರುವ ಕಾರಣ ಮಹಾರಾಷ್ಟ್ರ ಸರಕಾರ ಕೂಡಾ ತನ್ನ ನಿರ್ಧಾರವನ್ನು ಪರಿಶೀಲಿಸುವ ನಿರೀಕ್ಷೆಯಿದೆ.

   ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬಳಕೆಗೆ ಸಿದ್ಧವಾಗಿರುವ ಪೌಷ್ಠಿಕ ಆಹಾರ ಒದಗಿಸುವ ಕ್ರಮವನ್ನು ಸಮರ್ಥಿಸಲು ಸೂಕ್ತ ಪುರಾವೆ ದೊರೆತಿಲ್ಲ ಎಂಬ ಅಭಿಪ್ರಾಯವನ್ನು ಇದುವರೆಗೆ ಕೇಂದ್ರ ಸರಕಾರ ಹೊಂದಿತ್ತು.

  ತೀವ್ರ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಬಳಕೆಗೆ ಸಿದ್ಧವಾಗಿರುವ ಪೌಷ್ಠಿಕ ಆಹಾರ ನೀಡುವ ಕುರಿತು ನಿರ್ಧಾರ ಕೈಗೊಳ್ಳುವುದನ್ನು ಇನ್ನು ಮುಂದೆ ಆಯಾ ರಾಜ್ಯಗಳ ವಿವೇಚನೆಗೆ ಬಿಡಲಾಗಿದೆ ಎಂದು ಪ್ರಧಾನಮಂತ್ರಿಗಳ ಕಚೇರಿಯಲ್ಲಿ ನಡೆದ ಸಭೆಯ ಟಿಪ್ಪಣಿಯಲ್ಲಿ ತಿಳಿಸಲಾಗಿದೆ. ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳು, ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

 ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ಪ್ರಕಾರ, ದೇಶದಲ್ಲಿ 93 ಲಕ್ಷಕ್ಕೂ ಹೆಚ್ಚಿನ ಮಕ್ಕಳು ಕಡಿಮೆ ತೂಕ ಹೊಂದಿರುವುದು, ಕೃಶಕಾಯ ಇತ್ಯಾದಿಗಳಿಗೆ ಕಾರಣವಾಗುವ ತೀವ್ರ ಪೌಷ್ಠಿಕಾಂಶದ ಕೊರತೆಯಿಂದ ಬಳಲುತ್ತಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಮೇನಕಾ ಗಾಂಧಿ ಬಳಕೆಗೆ ಸಿದ್ಧವಾಗಿರುವ ಪೌಷ್ಟಿಕ ಆಹಾರವನ್ನು ಸಮರ್ಥಿಸುತ್ತಿದ್ದು ಕಳೆದ ತಿಂಗಳು ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಮಕ್ಕಳಿಗೆ ಕೇವಲ ಆಹಾರ ನೀಡಬೇಡಿ, ನಾವು ಪೌಷ್ಠಿಕಾಹಾರ ನೀಡುತ್ತೇವೆ ಎಂದು ಸಭೆಯಲ್ಲಿ ಮೇನಕಾ ಹೇಳಿಕೆ ನೀಡಿದ್ದರು. ಬಳಕೆಗೆ ಸಿದ್ಧವಾಗಿರುವ ಪೌಷ್ಠಿಕ ಆಹಾರವನ್ನು ಮಕ್ಕಳಿಗೆ ನೀಡುವ ಮೂಲಕ ಅವರ ಆರೋಗ್ಯ ಸುಧಾರಣೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಸಭೆಯಲ್ಲಿ ಮೇನಕಾ ಹೇಳಿದ್ದರು.

    ದೇಶದಾದ್ಯಂತ ಇರುವ 14 ಲಕ್ಷ ಅಂಗನವಾಡಿ ಕೇಂದ್ರಗಳ ಮೂಲಕ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ - ಪೌಷ್ಠಿಕ ಆಹಾರ ಒದಗಿಸುವುದು, ಚುಚ್ಚುಮದ್ದು ನೀಡುವುದು, ಶಿಫಾರಸು ಮಾಡುವುದು, ಆರೋಗ್ಯ ತಪಾಸಣೆ, ಶಾಲಾ ಪೂರ್ವ ಅಸಾಂಪ್ರದಾಯಿಕ ಶಿಕ್ಷಣ ವ್ಯವಸ್ಥೆ ಇತ್ಯಾದಿ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News