ದಾವೂದ್ ಚಟುವಟಿಕೆಗಳಿಗೆ ಬೆಂಬಲ ಇಲ್ಲ: ಯುಎಇ

Update: 2017-11-13 04:12 GMT

ದುಬೈ, ನ. 13: ಭೂಗತ ಚಟುವಟಿಕೆಗಳನ್ನು ನಮ್ಮ ನೆಲದಲ್ಲಿ ನಡೆಸಲು ಬಿಡುವುದಿಲ್ಲ ಎಂದು ಯುನೈಟೆಡ್ ಅರಬ್ ಎಮಿರೇಟ್ಸ್ ಸ್ಪಷ್ಟಪಡಿಸಿದೆ.

ಭಾರತದಿಂದ ಕ್ರಮ ಕೈಗೊಳ್ಳಬಹುದು ಎಂದು ಗುಪ್ತಚರ ಮಾಹಿತಿ ಬಂದರೆ ಅಂಥ ಚಟುವಟಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿದ್ಧ ಎಂದು ಹೇಳಿದೆ.

ಪಾಕಿಸ್ತಾನದಲ್ಲಿ ನೆಲೆ ಕಂಡುಕೊಂಡಿದ್ದಾರೆ ಎನ್ನಲಾದ ದಾವೂದ್ ಇಬ್ರಾಹಿಂ ಬಂಟರು ದುಬೈನಿಂದ ಕಾರ್ಯಚಟುವಟಿಕೆ ನಡೆಸದಂತೆ ತಡೆಯಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

2018ರ ಮೊದಲ ತ್ರೈಮಾಸಿಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಯುಎಇಗೆ ಎರಡನೇ ಬಾರಿಗೆ ಭೇಟಿ ನೀಡಿ, ಎರಡು ದೇಶಗಳ ನಡುವಿನ ವ್ಯಾಪಾರ ಸಂಬಂಧವನ್ನು ಬೆಳೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಗುಪ್ತಚರ ಇಲಾಖೆಗಳು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಲು ಮುಂದಾಗಿವೆ.

ದಾವೂದ್ ಬಂಟರು ಇಂದಿಗೂ ಮುಂಬೈನಲ್ಲಿ ಪ್ರಾಬಲ್ಯ ಹೊಂದಿದ್ದು, ಹಣ ವಸೂಲಿ ದಂಧೆಯಲ್ಲಿ ತೊಡಗಿದ್ದು, ಯುಎಇನಲ್ಲಿ ನಕಲಿ ಕಂಪನಿಗಳಾಗಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ.

ಆದರೆ ಭಾರತದ ರಾಜತಾಂತ್ರಿಕ ಮೂಲಗಳು, ಉಭಯ ದೇಶಗಳ ಭದ್ರತಾ ಸಹಕಾರದ ಬಗ್ಗೆ ಏನನ್ನೂ ಬಿಟ್ಟುಕೊಟ್ಟಿಲ್ಲ. ಆದರೆ 2015ರಲ್ಲಿ ಪ್ರಧಾನಿ ಮೋದಿ ಅಬುಧಾಬಿ ಭೇಟಿ ಮತ್ತು ಅಬುಧಾಬಿ ದೊರೆ ಮುಹಮ್ಮದ್ ಬಿನ್ ಝಯೇದ್ ಬಿನ್ ಸುಲ್ತಾನ್ ಅಲ್ ನಹ್ಯನ್ ಭಾರತಕ್ಕೆ ಪ್ರಜಾಪ್ರಭುತ್ವ ದಿನದ ಅತಿಥಿಯಾಗಿ ಆಗಮಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧ ಗಣನೀಯವಾಗಿ ಸುಧಾರಣೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News