×
Ad

ಶಿವಮೊಗ್ಗ: ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಓರ್ವ ಮೃತ್ಯು

Update: 2017-11-13 17:51 IST

ಶಿವಮೊಗ್ಗ, ನ.13: ಪೊಲೀಸ್ ಇಲಾಖೆಯ ನಿರ್ಬಂಧದ ನಡುವೆಯೂ ಜಿಲ್ಲೆಯಾದ್ಯಂತ ಹೋರಿ ಬೆದರಿಸುವ ಸ್ಪರ್ಧೆಗಳು ಮುಂದುವರಿದಿದ್ದು, ಸೋಮವಾರ ಶಿವಮೊಗ್ಗ ತಾಲೂಕಿನ ಆಯನೂರು ಕೋಟೆ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಹೋರಿ ತಿವಿದು ಓರ್ವರು ಮೃತಪಟ್ಟಿರುವ ಘಟನೆ ನಡೆದಿದೆ. 

ಆಯನೂರು ಸಮೀಪದ ಬಾಳೆಕೊಪ್ಪ ಗ್ರಾಮದ ನಿವಾಸಿ ಚಂದ್ರು (38) ಮೃತಪಟ್ಟ ವ್ಯಕ್ತಿ ಎಂದು ಗುರುತಿಸಲಾಗಿದೆ.

ಹೋರಿ ತಿವಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಇವರನ್ನು ತಕ್ಷಣ ಗ್ರಾಮಸ್ಥರು ವಾಹನವೊಂದರಲ್ಲಿ ಆಯನೂರಿನ ಸರ್ಕಾರಿ ಆಸ್ಪತ್ರೆಗೆ ಕೊಂಡೊಯುವ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. 

ಹೋರಿ ಹಿಡಿಯಲು ಮುಂದಾದ ಚಂದ್ರುವಿನ ಹೊಟ್ಟೆಯ ಕೆಳಭಾಗದಲ್ಲಿ ಹೋರಿ ತಿವಿದು ಗಾಯಗೊಳಿಸಿತ್ತು. ಈ ಘಟನೆಯ ನಂತರ ಹೋರಿ ಬೆದರಿಸುವ ಸ್ಪರ್ಧೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕುಂಸಿ ಪೊಲೀಸ್ ಠಾಣೆ ಸಬ್ ಇನ್ ಸ್ಪೆಪೆಕ್ಟರ್ ಸಂದೀಪ್ ಮತ್ತವರ ಸಿಬ್ಬಂದಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. 

ಅನುಮತಿಯಿಲ್ಲ: ಆಯನೂರು ಕೋಟೆ ಗ್ರಾಮದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಹೋರಿ ಬೆದರಿಸುವ ಸ್ಪರ್ಧೆಗೆ ಪೊಲೀಸ್ ಇಲಾಖೆ ಯಾವುದೇ ಅನುಮತಿ ನೀಡಿರಲಿಲ್ಲ. ಗ್ರಾಮಸ್ಥರು ಕೋರಿದ್ದ ಅನುಮತಿಯನ್ನು ಪೊಲೀಸರು ಸ್ಪಷ್ಟವಾಗಿ ನಿರಾಕರಿಸಿ, ಸ್ಪರ್ಧೆ ಆಯೋಜಿಸಿದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. 

ಇದರ ಹೊರತಾಗಿಯೂ ಕೆಲವರು ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಿದ್ದರು. ಈ ಸ್ಪರ್ಧೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಿಂದಲೂ ನೂರಾರು ಜನರು ಜಮಾಯಿಸಿದ್ದರು. ಸಾಕಷ್ಟು ನೂಕುನುಗ್ಗಲಿದ್ದ ಈ ಸ್ಪರ್ಧೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಂಡಿರಲಿಲ್ಲವೆಂದು ಪೊಲೀಸ್ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ. 

ನಡೆಯುತ್ತಿದೆ ಸ್ಪರ್ಧೆ: ದೀಪಾವಳಿ ಹಬ್ಬದ ನಂತರ ಜಿಲ್ಲೆಯಲ್ಲಿ ಅದರಲ್ಲಿಯೂ ಶಿವಮೊಗ್ಗ, ಶಿಕಾರಿಪುರ, ಸೊರಬ ತಾಲೂಕುಗಳ ವಿವಿಧ ಗ್ರಾಮಗಳಲ್ಲಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗುತ್ತದೆ. ಕೆಲ ಗ್ರಾಮಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಗ್ರಾಮಸ್ಥರು ಆಗಮಿಸುತ್ತಾರೆ. 

ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸ್ಪರ್ಧೆಗಳಲ್ಲಿ ಹೋರಿ ತಿವಿತ, ಕಾಲ್ತುಳಿತದ ಕಾರಣದಿಂದ ಸಾವು-ನೋವುಗಳು ಸಂಭವಿಸುತ್ತಿದ್ದವು. ಇದು ಸ್ಥಳೀಯ ಆಡಳಿತ ವ್ಯವಸ್ಥೆಗಳಿಗೂ ದೊಡ್ಡ ತಲೆನೋವಾಗಿ ಪರಿಣಮಿಸುತ್ತಿತ್ತು. ಈ ಕಾರಣದಿಂದಾಗಿ ಹೋರಿ ಬೆದರಿಸುವ ಸ್ಪರ್ಧೆಗಳ ಮೇಲೆ ಜಿಲ್ಲಾಡಳಿತ ನಿರ್ಬಂಧ ವಿಧಿಸಿತ್ತು. 

ಈ ವರ್ಷ ಜಿಲ್ಲೆಯಲ್ಲಿ ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಅವಕಾಶ ನೀಡುವುದಿಲ್ಲವೆಂದು ಜಿಲ್ಲಾ ರಕ್ಷಣಾಧಿಕಾರಿ ಅಭಿನವ್ ಖರೆ ಸ್ಪಷ್ಟವಾಗಿ ತಿಳಿಸಿದ್ದರು. ಪೊಲೀಸ್ ಇಲಾಖೆಯ ಕ್ರಮಕ್ಕೆ ಕೆಲ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಕೆಲ ರಾಜಕಾರಣಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆಯೂ ಜಿಲ್ಲೆಯ ಹಲವೆಡೆ ಕೆಲವರು ಹೋರಿ ಬೆದರಿಸುವ ಸ್ಪರ್ಧೆಗಳು ನಡೆದುಕೊಂಡು ಬಂದಿದ್ದವು. ಪೊಲೀಸರು ಕೂಡ ಏನೂ ಮಾಡಲಾಗದಂತಹ ಸ್ಥಿತಿ ನಿರ್ಮಾಣವಾಗಿತ್ತು. 

ಇದೀಗ ಆಯನೂರು ಕೋಟೆ ಗ್ರಾಮದಲ್ಲಿ ಹೋರಿ ತಿವಿತದಿಂದ ವ್ಯಕ್ತಿಯೋರ್ವರು ಮೃತಪಟ್ಟಿದ್ದಾರೆ. ಇದೀಗ ಹೋರಿ ಬೆದರಿಸುವ ಸ್ಪರ್ಧೆಗಳ ನಿಯಂತ್ರಣಕ್ಕೆ ಸಂಬಂಧಿಸಿದ ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು, ಜಿಲ್ಲಾ ಪೊಲೀಸ್ ಇಲಾಖೆಯು ಯಾವ ಕ್ರಮಕೈಗೊಳ್ಳಲಿದೆ ಎಂಬುವುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News