ಬೆಳಗಾವಿ: ಧರ್ಮಸಿಂಗ್, ಗೌರಿ ಲಂಕೇಶ್ ಸೇರಿ ಅಗಲಿದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ
ಬೆಳಗಾವಿ, ನ.13: ಮಾಜಿ ಸಿಎಂ ಎನ್.ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ, ವಿಜ್ಞಾನಿ ಪ್ರೊ.ಯು.ಆರ್.ರಾವ್, ಹಿರಿಯ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್, ಹಿರಿಯ ಸಾಹಿತಿ ಡಾ.ಸೈಯದ್ ಎಝಾಸುದ್ದೀನ್ ಸೇರಿದಂತೆ ಇತ್ತೀಚೆಗೆ ನಿಧನ ಹೊಂದಿದ ಗಣ್ಯರಿಗೆ ವಿಧಾನ ಮಂಡಲ ಉಭಯ ಸದನಗಳಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸೋಮವಾರ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿಕೃತ ಕಲಾಪ ಆರಂಭಗೊಳ್ಳುತ್ತಿದ್ದಂತೆ ಸಂತಾಪ ಸೂಚನೆ ನಿರ್ಣಯ ಮಂಡಿಸಿದ ಸ್ಪೀಕರ್ ಕೆ.ಬಿ.ಕೋಳಿವಾಡ ಹಾಗೂ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ನಿಧನ ಹೊಂದಿದ ಗಣ್ಯರನ್ನು ಉಲ್ಲೇಖಿಸಿ, ಅಗಲಿದ ಗಣ್ಯರ ಸೇವೆಯನ್ನು ಸ್ಮರಿಸಿದರು.
ಮಾಜಿ ಸಿಎಂ ಎನ್.ಧರ್ಮಸಿಂಗ್, ಮಾಜಿ ಸಚಿವ ಖಮರುಲ್ ಇಸ್ಲಾಂ, ಹಾಲಿ ವಿಧಾನಸಭಾ ಸದಸ್ಯ ಎಸ್.ಚಿಕ್ಕಮಾದು, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಪೋತದಾರ ರಾಮಾಭಾವು ಭೀಮಾರಾವ್, ಮಾಜಿ ಶಾಸಕ ವಿದ್ಯಾಧರ ಗುರೂಜಿ, ಸಿದ್ದನಗೌಡ ಸೋಮನಗೌಡ ಪಾಟೀಲ್, ಬಿ.ಬಿ.ಶಿವಪ್ಪ, ಜಯಪ್ರಕಾಶ ಶೆಟ್ಟಿ ಕೊಳ್ಳೆಬೈಲು, ಬಿ.ಜಿ.ಕೊಟ್ರಪ್ಪ, ಹಿರಿಯ ಸಾಹಿತಿ ಡಾ.ಸೈಯದ್ ಏಝಾಸುದ್ದೀನ್, ವಿಜ್ಞಾನಿ ಪ್ರೊ.ಯು.ಆರ್. ರಾವ್, ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹಾಗೂ ಪತ್ರಕರ್ತ ಖಾದ್ರಿ ಎಸ್.ಅಚ್ಯುತನ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಅಜಾತ ಶತ್ರು ಸ್ಮರಣೆ: ಸಂತಾಪ ಸೂಚನೆ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಧರ್ಮಸಿಂಗ್ ರಾಜಕಾರಣದಲ್ಲಿ ಅಜಾತ ಶತ್ರುವಾಗಿದ್ದರು. ಸರಳ, ಸಜ್ಜನ ವ್ಯಕ್ತಿತ್ವದ ಅವರು ಎಲ್ಲರೊಂದಿಗೂ ಉತ್ತಮ ಸಂಬಂಧ ಹೊಂದಿದ್ದರು. ಹೈದ್ರಾಬಾದ್ ಕರ್ನಾಟಕದಲ್ಲಿ ಧರ್ಮಸಿಂಗ್ ಹಾಗೂ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅವರು ಲವ-ಕುಶನಂತೆ ಇದ್ದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಧರ್ಮಸಿಂಗ್ ಅವರು ನಿರ್ವಹಿಸದ ಖಾತೆ ಇರಲಿಲ್ಲ ಎನ್ನಬಹುದು. ಅಪಾರ ಜನಪರ ಕಾಳಜಿ ಹೊಂದಿದ್ದ ಅವರು ಸಾಮಾಜಿಕ ನ್ಯಾಯದ ಬಗ್ಗೆ ಬದ್ಧತೆ ಹೊಂದಿದ್ದರು ಎಂದು ಸ್ಮರಿಸಿದರು.
ಖಮರುಲ್ ಇಸ್ಲಾಂ ಅವರು ಅಲ್ಪಸಂಖ್ಯಾತರ ಅಭಿವೃದ್ಧಿ ಬಗ್ಗೆ ನಿರಂತರ ಕಾಳಜಿ ಹೊಂದಿದ್ದರು. ಹೈದ್ರಾಬಾದ್ ಕರ್ನಾಟಕ ಭಾಗದಲ್ಲಿ ಹಲವಾರು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವ ಮೂಲಕ ಪ್ರದೇಶದ ಅಭಿವೃದ್ಧಿಗೆ ನಿರಂತರ ಶ್ರಮಿಸಿದ್ದಾರೆ. ಅವರು ಆರು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು ಮಾತ್ರವಲ್ಲದೆ ಲೋಕಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅತ್ಯಂತ ಜನಪ್ರಿಯ ನಾಯಕರಾಗಿದ್ದರು ಎಂದು ನೆನಪು ಮಾಡಿಕೊಂಡರು.
ಹಿರಿಯ ರಂಗಕರ್ಮಿ ಏಣಗಿ ಬಾಳಪ್ಪ ಅವರು ರಂಗಭೂಮಿಯ ಹಿರಿಯ ಜೀವಿ. 430ಕ್ಕೂ ಹೆಚ್ಚು ನಾಟಕ, 123 ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದ ಇವರು, ರಂಗಭೂಮಿಗೆ ಅನ್ವರ್ಥ ನಾಮವಾಗಿದ್ದರು. ಹಾಲಿ ವಿಧಾನ ಮಂಡಲದ ಸದಸ್ಯರಾಗಿದ್ದ ಎಸ್.ಚಿಕ್ಕಮಾದು ಅವರು ಹಿಂದುಳಿದ ಹಾಗೂ ವಾಲ್ಮಿಕಿ ಜನಾಂಗದ ಜನಾನುರಾಗಿ ನಾಯಕರಾಗಿದ್ದರು. ಜನಪರ ಕಾಳಜಿಯುಳ್ಳ, ಮೃದು ಸ್ವಭಾವದ ರಾಜಕಾರಣಿಯಾಗಿದ್ದ ಚಿಕ್ಕಮಾದು ಅವರೊಂದಿಗೆ ಒಂದೇ ಪಕ್ಷದಲ್ಲಿ ಹಲವು ವರ್ಷ ಕಾರ್ಯನಿರ್ವಹಿಸಿದ್ದನ್ನು ಮುಖ್ಯಮಂತ್ರಿ ಸ್ಮರಿಸಿದರು.
ವಿಪಕ್ಷದ ನಾಯಕ ಜಗದೀಶ ಶೆಟ್ಟರ್ ಮಾತನಾಡಿ, ಧರ್ಮಸಿಂಗ್ ಅವರು ಅತ್ಯಂತ ಸರಳ ವ್ಯಕ್ತಿತ್ವದ ಸಜ್ಜನ ರಾಜಕಾರಣಿ. ಧಾರವಾಡ ಹಾಗೂ ಕಲಬುರಗಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅವರು ಪ್ರಮುಖ ಕಾರಣಕರ್ತರಾಗಿದ್ದಾರೆ ಎಂದರು.
ಈ ವೇಳೆ ಜೆಡಿಎಸ್ ಉಪನಾಯಕ ವೈ.ಎಸ್.ವಿ.ದತ್ತಾ, ಸರ್ವೋದಯ ಕರ್ನಾಟಕ ಪಕ್ಷದ ಸದಸ್ಯ ಕೆ.ಎಸ್.ಪುಟ್ಟಣ್ಣಯ್ಯ, ಆಡಳಿತ ಪಕ್ಷದ ಸದಸ್ಯ ಸಿದ್ದು ನ್ಯಾಮೆಗೌಡ, ಶಿವಮೂರ್ತಿ ಮಂಕಾಳ ಸುಬ್ಬ ವೈದ್ಯ ಸ್ಭೆರಿದಂತೆ ಇನ್ನಿತರ ಸದಸ್ಯರು ಮತ್ತಿತರ ಸದಸ್ಯರು ಸಂತಾಪ ಸೂಚನೆ ನಿರ್ಣಯಕ್ಕೆ ಬೆಂಬಲಿಸಿದರು.