ರಾಜ್ಯ ಸರಕಾರ ಕೊಟ್ಟ ಮಾತು ತಪ್ಪಿದೆ: ಎಚ್.ಎಸ್.ದೊರೆಸ್ವಾಮಿ ಅಸಮಾಧಾನ
ಬೆಳಗಾವಿ, ನ.13 : ರಾಜ್ಯದಲ್ಲಿನ ಭೂ ಮತ್ತು ವಸತಿ ಹೀನರಿಗೆ ಜಮೀನು ಒದಗಿಸುವುದಾಗಿ ರಾಜ್ಯ ಸರಕಾರ ಕಳೆದ ಅಧಿವೇಶನದಲ್ಲಿ ಭರವಸೆ ನೀಡಿತ್ತು. ಅದನ್ನು ಇವರೆಗೂ ಈಡೇರಿಸದೆ, ಕೊಟ್ಟ ಮಾತನ್ನು ತಪ್ಪಿದೆ ಎಂದು ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಬೆಳಗಾವಿಯ ರೈಲು ನಿಲ್ದಾಣದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ವರ್ಷ ಧರಣಿಗೆ ಕುಳಿತಾಗ, ಕಂದಾಯ ಸಚಿವರ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸುವುದಾಗಿ ಮುಖ್ಯಮಂತ್ರಿ ತಿಳಿಸಿದ್ದರು. ಆದರೆ, ಈವರೆಗೂ ಸಮಿತಿ ರಚಿಸಿಲ್ಲ. ಈ ಬಾರಿಯಾದರೂ ಬಡವರ ವಿಚಾರ ಸದನದಲ್ಲಿ ಚರ್ಚೆಯಾಗಬೇಕೆಂದು ಒತ್ತಾಯಿಸಲು ಬಂದಿದ್ದೇವೆ ಎಂದರು.
ಬಡವರು ಹಸಿದುಕೊಂಡು ಇರುವುದು ಸಾಮಾಜಿಕ ಅನ್ಯಾಯ. ಅರ್ಹರಿಗೆ ಜಮೀನು ಸಿಗಬೇಕು. ಅದರಿಂದ ಅವರ ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನವೂ ಸುಧಾರಿಸುತ್ತದೆ. ಅಧಿವೇಶನ ಮುಗಿಯುವುದರೊಳಗೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಭೂಹಂಚಿಕೆ ಸಮಿತಿ ರಚನೆಯ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿರೋಧ ಪಕ್ಷಗಳು ನಮ್ಮ ಬೇಡಿಕೆಗಳನ್ನು ಕೇವಲ ಬಾಯಿ ಮಾತಿನ ಮೂಲಕ ಬೆಂಬಲಿಸುತ್ತಿವೆ. ಅವರಿಗೆ ಬಡವರ ಕುರಿತ ಕಾಳಜಿ ಇಲ್ಲ. ಬಡವರನ್ನು ನಿರ್ಲಕ್ಷಿಸುವ ಪಕ್ಷಗಳಿಗೆ ಭವಿಷ್ಯವಿಲ್ಲ ಎಂದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ನೂರ್ ಶ್ರೀಧರ್ ಮಾತನಾಡಿ, ಜಮೀನಿಗಾಗಿ ಈವರೆಗೂ ಸುಮಾರು 4 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಅವುಗಳನ್ನು ಆಯಾ ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಅರ್ಹರಿಗೆ ಆದಷ್ಟು ಬೇಗ ಜಮೀನುಗಳನ್ನು ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರರನ್ನು ಜೈಲಿಗೆ ಹಾಕುವ ಮೂಲಕ ಜಮೀನಿಗಾಗಿ ಚಿತ್ರದುರ್ಗ, ಹಾವೇರಿಯಲ್ಲಿ ನಡೆದ ಧರಣಿಗಳನ್ನು ಹತ್ತಿಕ್ಕಲಾಯಿತು. ಬಡವರು ವಾಸಿಸುವ ಪ್ರದೇಶ, ಶ್ಮಶಾನಗಳನ್ನು ಕ್ರೀಡಾಂಗಣ, ಉದ್ಯಾನ ಮಾಡಲು ತೋರುವ ಕಾಳಜಿಯನ್ನು ಜಮೀನು ಹಂಚಿಕೆಯಲ್ಲಿ ತೋರಬೇಕು ಎಂದು ಅವರು ಆಗ್ರಹಿಸಿದರು.
ನಾವೇನು ರಾಜಕಾರಣಿಗಳ ಆಸ್ತಿ ಕೇಳುತ್ತಿಲ್ಲ. ಸರಕಾರಿ ಜಮೀನುಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಮೂರು ತಿಂಗಳೊಳಗೆ ಕಾಗದ ಪತ್ರ ಕೊಡಬೇಕು. ಅದರಿಂದ ಅವರ ಬದುಕಿಗೊಂದು ನೆಲೆ ಸಿಗುತ್ತದೆ ಎಂದರು.