ಸಮಸ್ಯೆ ಅರ್ಥವಾಗಲು ಯೋಜನಾ ಸ್ಥಳಕ್ಕೆ ಭೇಟಿ ಅಗತ್ಯ: ಜಯಚಂದ್ರ

Update: 2017-11-13 18:15 GMT

ಸೊರಬ, ನ.13: ಯೋಜನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ವೀಕ್ಷಿಸಿದಾಗ ಅದರ ಸಂಪೂರ್ಣ ಮಾಹಿತಿ ದೊರೆಯುವುದಲ್ಲದೆ ಅಲ್ಲಿನ ಸಮಸ್ಯೆಗಳು ಅರ್ಥವಾಗುತ್ತವೆ ಎಂದು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ.

ಸಾರ್ವಜನಿಕ ಹಿತರಕ್ಷಣಾ ವೇದಿಕೆ ವತಿಯಿಂದ ಅ.30ರಂದು ಪ್ರತಿಭಟನೆ ನಡೆಸಿ ಮನವಿ ಮಾಡಿದ ಮೇರೆಗೆ ರವಿವಾರ ಸಂಜೆ ತಾಲೂಕಿನ ಕುಬಟೂರು ಗ್ರಾಮಕ್ಕೆ ಭೇಟಿ ನೀಡಿದ ಅವರು, ಬಂಕಸಾಣ ಬಳಿ ಹರಿದು ಹೋಗಿರುವ ವರದಾ ನದಿಯಿಂದ ಕುಬಟೂರು ಕೆರೆಗೆ ನೀರು ತುಂಬಿಸುವ ಯೋಜನೆಯ ಕೆರೆ ವೀಕ್ಷಿಸಿ ಅವರು ಮಾತನಾಡಿದರು.

ಯೋಜನೆಯಿಂದ ಸಾಕಷ್ಟು ರೈತರಿಗೆ ಹಾಗೂ ಗ್ರಾಮಸ್ಥರಿಗೆ ಉಪಯೋಗವಿರುವುದರಿಂದ ಬಹಳಷ್ಟು ಅಡಿಕೆ ತೋಟ ಈ ಕೆರೆಯನ್ನು ಅವಲಂಬಿಸಿರುವುದರಿಂದ ಈ ಕೆರೆಗೆ ಶಕ್ತಿ ನೀಡುತ್ತೇನೆ. ಈ ಯೋಜನೆಯ ಮಾದರಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಮಂಜೂರು ಮಾಡಿ ಅನುದಾನ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.

ಸಾರ್ವಜನಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಕೆ.ಪಿ. ವೀರೇಶ್, ತಾಲೂಕಿನಲ್ಲಿ ಸತತ ಬರಗಾಲವಿದ್ದು, ಕಳೆದ 4 ವರ್ಷಗಳಿಂದ ತಾಲೂಕಿನ ಕೆರೆಗಳು ತುಂಬಿಲ್ಲ. ರೈತರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡುವಂತೆ ಮನವಿ ಮಾಡಿದರು.

ಕುಬಟೂರು ಕೆರೆ ಅಂದಾಜು 300 ಎಕರೆಗಿಂತಲೂ ಹೆಚ್ಚು ವಿಸ್ತೀರ್ಣ ಹೊಂದಿದ್ದು, ಬಂಕಸಾಣದ ಬಳಿ ಇರುವ ವರದಾ ನದಿಯಿಂದ ಕುಬಟೂರು ಕೆರೆಗೆ 2.5 ಅಡಿ ಸಿಮೆಂಟ್ ಕೊಳವೆಗಳ ಮೂಲಕ 300 ಎಚ್‌ಪಿಯ ಎರಡು ಮೋಟಾರುಗಳ ಮುಖಾಂತರ ಅಂದಾಜು 9 ಕೋಟಿ ರೂ. ವೆಚ್ಚದ ಯೋಜನೆಯಾಗಿದೆ. ಇದರಿಂದ 13 ಗ್ರಾಮಗಳ ಸುಮಾರು 10 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕಲಿದೆ. ಅಲ್ಲದೇ ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಪ್ಪಲಿದೆ ಎಂದು ಯೋಜನೆಯ ಬಗ್ಗೆ ಮಾಹಿತಿ ನೀಡಿದರು.

ಪ್ರತಿಭಟನೆಗೆ ಸ್ಪಂದಿಸಿ ಸ್ಥಳಕ್ಕೆ ಆಗಮಿಸಿ ಯೋಜನೆ ಮಂಜೂರಾತಿ ಮಾಡುವುದಾಗಿ ಭರವಸೆ ನೀಡಿದ ಸಚಿವ ಕಾರ್ಯವೈಖರಿಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾರ್ವಜನಿಕ ಹಿತರಕ್ಷಣಾ ವೇದಿಕೆ ಕಾರ್ಯದರ್ಶಿ ಎಂ.ಬಿ. ಪಾಟೀಲ್, ಕೆ.ಟಿ. ಬಸವರಾಜ್, ಬಸವನಗೌಡ, ನಾಗರಾಜ ಹಿರಿಯೂರು, ಶಿವಣ್ಣ ಸಮನವಳ್ಳಿ, ಸಿದ್ದಲಿಂಗೇಶ ಸ್ವಾಮಿ, ಎಚ್. ಪ್ರಶಾಂತ, ಕೆ.ಎಸ್. ರಾಘವೇಂದ್ರ ರಾವ್ ಹಾಗೂ ಗ್ರಾಮಸ್ಥರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News