×
Ad

ಕೊಟ್ಟಿಗೆಹಾರದಲ್ಲಿ ವಿವಿಧ ಸಂಘಟನೆಗಳಿಂದ ಗೋ. ಮಧುಸೂದನ್ ವಿರುದ್ಧ ಪ್ರತಿಭಟನೆ

Update: 2017-11-13 23:50 IST

ಬಣಕಲ್, ನ.13: ಇತ್ತೀಚೆಗೆ ಟಿಪ್ಪುಜಯಂತಿ ವಿಷಯದ ಬಗ್ಗೆ ದೃಶ್ಯಮಾಧ್ಯಮದ ಚರ್ಚೆಯಲ್ಲಿ ಬಿಜೆಪಿಯ ಗೋ. ಮಧು ಸೂದನ್ ಸಂವಿಧಾನವನ್ನು ವಿರೋಧಿಸಿ ಹೇಳಿಕೆ ನೀಡಿರುವುದನ್ನು ವಿರೋಧಿಸಿ ಕೊಟ್ಟಿಗೆಹಾರ ವೃತ್ತದಲ್ಲಿ ಅಂಬೇಡ್ಕರ್ ಮತ್ತು ವಿವಿಧ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ಆರ್‌ಟಿಐ ಕಾರ್ಯಕರ್ತ ಪ್ರಭಾಕರ್‌ಬಿನ್ನಡಿ ಮಾತನಾಡಿ, ಗೊ. ಮಧುಸೂದನ್ ಸಂವಿಧಾನದ ರಚನೆಯ ಬಗ್ಗೆ ಅತಿರೇಕದಿಂದ ಅವಹೇಳನಕಾರಿ ಹೇಳಿಕೆ ನೀಡಿರುವುದು ಡಾ.ಅಂಬೇಡ್ಕರ್ ಅವರನ್ನು ಅವಮಾನಗೊಳಿಸಿದ್ದಾರೆ. ಸಂವಿಧಾನಕ್ಕೆ ಮತ್ತು ರಾಷ್ಟ್ರದ ಐಕ್ಯತೆಗೆ ಧಕ್ಕೆ ತಂದ ಕಾರಣ ರಾಷ್ಟ್ರದ್ರೋಹಿ ಆರೋಪದಡಿ ಅವರ ವಿರುದ್ಧ ದೂರು ದಾಖಲಿಸಬೇಕು. ಬಿಜೆಪಿ ಹಿರಿಯ ಮುಖಂಡ ಗೋ. ಮಧುಸೂದನ್ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಅಂಬೇಡ್ಕರ್ ಯುವಕರ ಸಂಘಟನೆಯ ಕಾರ್ಯದರ್ಶಿ ಜೈಪಾಲ್ ಮಾತನಾಡಿ, ಓಟು ಬ್ಯಾಂಕಿಗಾಗಿ ಬಿಜೆಪಿಯವರು ಏನು ಮಾತನಾಡಿದರೂ ನಡೆಯುತ್ತದೆ ಎಂಬುದು ಸರಿಯಲ್ಲ. ಸಂವಿಧಾನ ರಚಿಸಿ 67 ವರ್ಷಗಳು ಸಂದಿವೆ. ಸಂವಿಧಾನ ರಚನೆ ಮಾಡಿರುವುದು ಸರಿಯಿಲ್ಲ ಎಂದು ಬಿಜೆಪಿಯ ಗೋ.ಮಧುಸೂದನ್ ಸಂವಿಧಾನದ ವಿರೋಧಿ ಹೇಳಿಕೆ ನೀಡಿರುವುದು ಖಂಡನೀಯ. ಇದರಿಂದ ಡಾ.ಅಂಬೇಡ್ಕರ್‌ರಿಗೆ ಅವಮಾನವಾಗಿರುವುದನ್ನು ನಾವು ಸಹಿಸುವುದಿಲ್ಲ. ಸಂವಿಧಾನಕ್ಕೆ ಗೌರವ ಕೊಡುವುದು ಪ್ರತಿಯೋರ್ವ ನಾಗರಿಕನ ಕರ್ತವ್ಯ ಎಂದರು.

ಪ್ರತಿಭಟನೆಯಲ್ಲಿ ಹಿರಿಯರಾದ ಟಿ.ಎ.ಖಾದರ್ ಮಾತನಾಡಿದರು. ವಿವಿಧ ಸಂಘಟನೆಯ ಕಾರ್ಯಕರ್ತರು ಕೊಟ್ಟಿಗೆಹಾರದಲ್ಲಿ ಧಿಕ್ಕಾರ ಕೂಗುತ್ತಾ ಗೋ. ಮಧುಸೂದನ್ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಿಎಸ್ಪಿಯ ಹೋಬಳಿ ಅಧ್ಯಕ್ಷ ಪರಮೇಶ್, ಉಪಾಧ್ಯಕ್ಷ ಪ್ರಶಾಂತ್‌ಪೂಜಾರಿ, ಅಬ್ದುಲ್‌ರೆಹಮಾನ್, ರಘು, ನಾಗೇಶ್, ಮಹೇಶ್, ದೇವೆಂದ್ರ, ಸಿದ್ದೀಕ್, ಅಂಬೇಡ್ಕರ್ ಸಂಘಟನೆಯ ಶಿವಕುಮಾರ್, ಮರ್ಕಲ್ ಪುಟ್ಟಯ್ಯ, ದಿಲೀಪ್, ಪೂರ್ಣೇಶ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News