ವೈದ್ಯಕೀಯ ಮಸೂದೆಗೆ ಖಾಸಗಿ ವೈದ್ಯರ ವಿರೋಧಕ್ಕೆ ಆಕ್ಷೇಪಿಸಿ ಪ್ರತಿಭಟನೆ

Update: 2017-11-13 18:21 GMT

ಶಿವಮೊಗ್ಗ, ನ. 13: ರಾಜ್ಯ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ಖಾಸಗಿ ವೈದ್ಯಕೀಯ ಮಸೂದೆ ಬೆಂಬಲಿಸಿ ಹಾಗೂ ಮಸೂದೆ ಜಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವ ಖಾಸಗಿ ಆಸ್ಪತ್ರೆಗಳ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿ, ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಸಾರ್ವಜನಿಕರ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ರಾಜ್ಯ ಸರಕಾರ ಖಾಸಗಿ ಆಸ್ಪತ್ರೆ, ನರ್ಸಿಂಗ್ ಹೋಂಗಳ ನಿಯಂತ್ರಣಕ್ಕೆ ಮುಂದಾಗಿದೆ. ಇದು ಸ್ವಾಗತಾರ್ಹ ಸಂಗತಿ. ಇದರಿಂದ ಬಡ ರೋಗಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಮಸೂದೆಯು ಸರಕಾರದ ಜನಪರ ಆಡಳಿತಕ್ಕೆ ಸಾಕ್ಷಿಯಾಗಿದೆ ಎಂದು ತಿಳಿಸಿದರು. ಕೆಲ ಖಾಸಗಿ ಆಸ್ಪತ್ರೆ-ನರ್ಸಿಂಗ್ ಹೋಂಗಳು ಚಿಕಿತ್ಸೆ ಆಗಮಿಸುವ ರೋಗಿಗಳಿಂದ ಹಣ ಸುಲಿಗೆ ಮಾಡುತ್ತಿವೆ. ಸೇವಾ ಕ್ಷೇತ್ರವಾಗಿದ್ದ ವೈದ್ಯಕೀಯ ವಲಯವನ್ನು ವ್ಯಾಪಾರಿ ಕ್ಷೇತ್ರವಾಗಿ ಪರಿವರ್ತಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಸೂದೆಯಲ್ಲಿ ರಾಜ್ಯದ ಕೋಟ್ಯಾಂತರ ಜನರ ಹಿತಾಸಕ್ತಿ ಅಡಗಿದ್ದು, ಇದು ಜಾರಿಯಾದರೆ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
ರೋಗಿಗಳಿಗೆ ಚಿಕಿತ್ಸೆ ನಿರಾಕರಣೆ ಮಾಡಿ ಪ್ರತಿಭಟನೆಗೆ ಮುಂದಾಗುವ ಖಾಸಗಿ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಅಂತಹ ಆಸ್ಪತ್ರೆಗಳ ಮಾನ್ಯತೆ ರದ್ದುಗೊಳಿಸಬೇಕು. ಜನಪಯೋಗಿ ಮಸೂದೆಯನ್ನು ಸರಕಾರ ಕಾರ್ಯಗತಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಕೆ. ದೇವೇಂದ್ರಪ್ಪ, ವಿಶ್ವನಾಥ್ ಕಾಶಿ, ನಾಗರಾಜ್, ಸಿ.ಜೆ.ಮಧುಸೂಧನ್, ಬಾಲಾಜಿ, ಕೆ. ಚೇತನ್ ಇತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News