ಪತ್ರಕರ್ತ ಕೆ.ಬಿ. ಮಹಂತೇಶ್ ನಿಧನ: ಹಲವರಿಂದ ಸಂತಾಪ

Update: 2017-11-13 18:27 GMT

ಮಡಿಕೇರಿ, ನ.13: ಕೊಡಗು ಜಿಲ್ಲೆಯ ಹಿರಿಯ ಪತ್ರಕರ್ತ, ಮೈಸೂರು ಮಿತ್ರ ದಿನ ಪತ್ರಿಕೆಯ ಜಿಲ್ಲಾ ವರದಿಗಾರ ಕೆ.ಬಿ. ಮಹಂತೇಶ್(49) ಅವರು ಸೋಮವಾರ ಬೆಳಗ್ಗೆ ಮೈಸೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದಿದ್ದು, ಅಗಲಿದ ಚೇತನಕ್ಕೆ ಕೊಡಗು ಜಿಲ್ಲಾ ಪತ್ರಿಕಾ ಭವನ ಟ್ರಸ್ಟ್ ಟ್ರಸ್ಟಿಗಳು ಒಳಗೊಂಡಂತೆ ಪತ್ರಕರ್ತರು ಗೌರವ ಸಲ್ಲಿಸಿ ಕಂಬನಿ ಮಿಡಿದರು.

ಕಳೆದ ಕೆಲ ದಿನಗಳ ಅನಾರೋಗ್ಯದ ಬಳಿಕ ಸೋಮವಾರ ಬೆಳಗ್ಗೆ ಮಹಂತೇಶ್ ಅವರು ಸಾವನ್ನಪ್ಪಿದ್ದು, ತಾಯಿ, ಪತ್ನಿ , ಮೂವರು ಪುತ್ರಿಯರು, ಬಂಧುಬಳಗವನ್ನು ಅಗಲಿದ್ದು, ಅಂತ್ಯಸಂಸ್ಕಾರ ಅವರ ಹುಟೂರು ಬೆಳಗಾವಿಯ ಬೈಲಹೊಂಗಲದಲ್ಲಿ ನಡೆಯಲಿದೆ. ಕೊಡಗು ಪತ್ರಿಕಾ ಭವನ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಆಗಿದ್ದ ಕೆ.ಬಿ. ಮಹಂತೇಶ್ ನಿಧನಕ್ಕೆ ಸಂತಾಪ ಸೂಚಿಸಿ, ನಗರದ ಕೊಡಗು ಪತ್ರಿಕಾ ಭವನ ಟ್ರಸ್ಟ್ ಕಚೇರಿಯಲ್ಲಿ ಮಹಂತೇಶ್‌ರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸಲಾಯಿತು.

ಟ್ರಸ್ಟ್‌ನ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್, ಪತ್ರಿಕಾ ಭವನ ಟ್ರಸ್ಟ್‌ನ ಟ್ರಸ್ಟಿ ಜಿ. ಚಿದ್ವಿಲಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಸಂದರ್ಭ ಟ್ರಸ್ಟಿಗಳಾದ ವಿ.ಪಿ. ಸುರೇಶ್, ಕೆ.ತಿಮ್ಮಪ್ಪ, ಶ್ರೀಧರ ಹೂವಲ್ಲಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಸಿದ್ದಾಪುರ (ಕೊಡಗು): ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಸಿದ್ದಾಪುರ ನಗರ ಪತ್ರಕರ್ತರ ಸಂಘ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನಿರ್ವಾಣಪ್ಪ, ಯುವಕ ಸಂಘಗಳು, ದಸಂಸ, ಕಾರ್ಮಿಕ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಮಹಂತೇಶ್ ನೀಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಸಂಘ: ಕೆ.ಬಿ. ಮಹಂತೇಶ್ ನಿಧನಕ್ಕೆ ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪಅಧ್ಯಕ್ಷತೆಯಲ್ಲಿ ಸೋಮವಾರ ಪತ್ರಿಕಾ ಭವನದಲ್ಲಿ ಸಂತಾಪ ಸಭೆ ನಡೆಯಿತು. ಮೃತರ ಗೌರವಾರ್ಥ 2 ನಿಮಿಷ ಮೌನಾಚರಣೆ ಮಾಡಲಾಯಿತು.

ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಉಪಾಧ್ಯಕ್ಷ ಜಿ.ವಿ. ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಕುಡೆಕಲ್ಲು ಸಂತೋಷ್, ಖಜಾಂಚಿ ಸವಿತಾ ರೈ, ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಣ್ಣುವಂಡ ಎಂ. ಚಂಗಪ್ಪ, ಮತ್ತಿತರರು ಮಾತನಾಡಿದರು. ಮಹಂತೇಶ್ ಅವರ ನಿಧನಕ್ಕೆ ಎಸ್‌ಡಿಪಿಐ ಜಿಲ್ಲಾ ಸಮಿತಿ ಸಂತಾಪ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News