ಮಡಿಕೇರಿ: ಜಿಲ್ಲಾ ಉಪವಿಭಾಗಾಧಿಕಾರಿ ವರ್ಗಾವಣೆಗೆ ಆಗ್ರಹ

Update: 2017-11-13 18:28 GMT

ಮಡಿಕೇರಿ, ನ. 13: ಕೊಡಗು ಜಿಲ್ಲಾ ಉಪವಿಭಾಗಾಧಿಕಾರಿ ಕರ್ತವ್ಯ ಲೋಪವೆಸಗಿ ಭೂ ಮಂಜೂರಾತಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿರುವ ಕೊಡ್ಲಿಪೇಟೆಯ ಚಿಕ್ಕಕುಂದ ಗ್ರಾಮದ ನಿವಾಸಿ ಸಿ.ಆರ್.ದರ್ಶನ್, ಎಸಿ ಅವರನ್ನು ಒಂದು ತಿಂಗಳ ಒಳಗಾಗಿ ವರ್ಗಾವಣೆಗೊಳಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ಮತ್ತು ಕಾನೂನು ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಕುಂದ ಗ್ರಾಮದಲ್ಲಿ ಕಳೆದ ಅರವತ್ತು ವರ್ಷಗಳಿಂದ ತಮ್ಮ ಪೂರ್ವಜರು ಮನೆ ನಿರ್ಮಿಸಿಕೊಂಡು ವಾಸವಿರುವ ಜಾಗವನ್ನು ಎಲ್ಲಾ ಕಾನೂನುಗಳನ್ನು ಉಲ್ಲಂಘಿಸಿ ಉಪವಿಭಾಗಾಧಿಕಾರಿ ಅವರು ವ್ಯಕ್ತಿಯೊಬ್ಬರಿಗೆ ವರ್ಗಾಯಿಸಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ನ್ಯಾಯಾಲಯ ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಅವರ ಉಪಸ್ಥಿತಿಯಲ್ಲಿ ವಿಚಾರಣೆ ನಡೆಸಿದಾಗ ಉಪ ವಿಭಾಗಾಧಿಕಾರಿಗಳ ಕರ್ತವ್ಯ ಲೋಪ ಬೆಳಕಿಗೆ ಬಂದಿದೆ.

ಉಪ ವಿಭಾಗಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಸರಕಾರಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಸಬಹುದೆಂದು ಅಪರ ಜಿಲ್ಲಾಧಿಕಾರಿ 2017ರ ಆಗಸ್ಟ್ 9 ರಂದು ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ ಎಸಿ ಅವರ ತಪ್ಪುಸಾಬೀತಾಗಿದ್ದು, ಅವರನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿದರು.

ಉಪ ವಿಭಾಗಾಧಿಕಾರಿಯವರನ್ನು ವರ್ಗಾವಣೆಗೊಳಿಸದಿದ್ದಲ್ಲಿ ಉಪವಾಸ ಸತ್ಯಾಗ್ರಹ ಮತ್ತು ಕಾನೂನುಹೋರಾಟ ನಡೆಸುವುದಾಗಿ ದರ್ಶನ್ ಎಚ್ಚರಿಕೆ ನೀಡಿದರು. ಗೋಷ್ಠಿಯಲ್ಲಿ ಸ್ಥಳೀಯ ಗ್ರಾಮಸ್ಥರಾದ ಎಚ್.ಎಸ್. ಯೋಗೇಶ್ ಹಾಗೂ ಮುರಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News