ಜ್ಞಾನದ ಬಲದಿಂದ ಅಜ್ಞಾನವನ್ನು ಹೋಗಲಾಡಿಸಬೇಕು: ಸಾಹಿತಿ ತಿಪ್ಪೇರುದ್ರಪ್ಪ

Update: 2017-11-14 12:06 GMT

ಚಿಕ್ಕಮಗಳೂರು, ನ.14: ಜ್ಞಾನದ ಬಲದಿಂದ ಅಜ್ಞಾನವನ್ನು ಹೋಗಲಾಡಿಸಲು ಪ್ರತಿಯೊಬ್ಬರು ಪಣತೊಡಬೇಕು ಎಂದು ಸಾಹಿತಿ ತಿಪ್ಪೇರುದ್ರಪ್ಪ ಹೇಳಿದ್ದಾರೆ.

ಜಿಲ್ಲಾ ಕೇಂದ್ರ ಗ್ರಂಥಾಲಯ ಹಾಗೂ ನಗರ ಕೇಂದ್ರ ಗ್ರಂಥಾಲಯ ಆಶ್ರಯದಲ್ಲಿ ಮಂಗಳವಾರದಿಂದ ನ.20ರವರೆಗೆ ನಡೆಯಲಿರುವ ನಗರದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2017 ಹಾಗೂ ಪುಸ್ತಕ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಂಥಾಲಯವು ಒಂದು ದೇವಾಲಯವಿದ್ದಂತೆ. ವಿದ್ಯೆ ಸಾಧಕರ ಸ್ವತ್ತು ಸೋಮಾರಿಗಳ ಸ್ವತ್ತಲ್ಲ ಎಂಬುದನ್ನು ಮನಗಂಡು ಸಾಧನೆಗೆ ಹೆಚ್ಚಿನ ಒತ್ತು ನೀಡಬೇಕು ಎಂದ ಅವರು, ಪ್ರತಿಯೊಬ್ಬರು ಗ್ರಂಥಾಲಯದಲ್ಲಿರುವ ಪುಸ್ತಕಗಳ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.

ಕಲ್ಯಾಣ ನಗರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಎಸ್.ಎಂ.ಲೋಕೇಶಪ್ಪ ಮಾತನಾಡಿ, ಆಧುನಿಕ ಕಂಪ್ಯೂಟರ್ ಯುಗದಲ್ಲಿ ಈಗಿನ ಯುವ ಜನತೆಗೆ ಓದಿನ ಆಸಕ್ತಿ ಕಮ್ಮಿಯಾಗಿದೆ. ಎಲ್ಲರೂ ಬಂದು ಗ್ರಂಥಾಲಯದಲ್ಲಿ ಲಭ್ಯವಿರುವ ಒಳ್ಳೆಯ ಪುಸ್ತಕಗಳನ್ನು ಓದಿ ಜ್ಞಾನವನ್ನು ಪಡೆದುಕೊಳ್ಳಬೇಕು ಎಂ=ದರು. 

ನಿವೃತ್ತ ಪ್ರಾಂಶುಪಾಲ ಮುನಾವರ್ ಪಾಷಾ ಮಾತನಾಡಿ, ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಮಾತ್ರ ಅನ್ವಯಿಸದೆ ವರ್ಷಪೂರ್ತಿ ಕನ್ನಡ ಹಬ್ಬವಾಗುವಂತೆ ಆಗಲಿ, ಗ್ರಂಥಾಲಯದಲ್ಲಿ ಓದಲು ಬರುವ ಹಿರಿಯ ನಾಗರಿಕರಿಗೆ ಯುವಜನತೆ ಗೌರವ ಕೊಟ್ಟು ಅವರಿಗೆ ಓದುವುದಕ್ಕೆ ಅನುವು ಮಾಡಿಕೊಡಬೇಕೆಂದು ಕೋರಿದರು.

ರವೀಶ್ ಕ್ಯಾತನಬೀಡು ವಹಿಸಿ ಮಾತನಾಡಿ, ಹಿರಿಯ ತಲೆಮಾರಿಗೆ ಹಾಗೂ ಹೊಸ ತಲೆಮಾರಿಗೆ ಎರಡಕ್ಕೂ ಜಗತ್ತಿನಲ್ಲಿ ಗ್ರಂಥಾಲಯ ಒಂದು ದೊಡ್ಡ ದೇವಾಲಯವಿದ್ದಂತೆ. ಓದು ವ್ಯಕ್ತಿಯನ್ನು, ವ್ಯಕ್ತಿತ್ವವನ್ನು ರೂಪಿಸುತ್ತದೆ. ಉದ್ಯೋಗನವನ್ನು ಅರಸಿ ಓದುವುದಲ್ಲ. ಬದುಕನ್ನು ಅರಸಿ ಓದಬೇಕು. ಓದಿನ ಮೂಲಕ ನೆಲದ ಸಂಸ್ಕೃತಿಯನ್ನು ಅನಾವರಣ ಮಾಡಬೇಕು. ಅದಕ್ಕಾಗಿ ಗ್ರಂಥಾಲಯಕ್ಕೆ ಬಂದು ಓದಿ ಎಂದು ಸಲಹೆ ನೀಡಿದರು.

ಈ ವೇಳೆ ಪುಸ್ತಕಗಳ ಪ್ರದರ್ಶನವನ್ನು ಅಪರ ಜಿಲ್ಲಧಿಕಾರಿ ಶ್ರೀಮತಿ ವೈಶಾಲಿ ಉದ್ಘಾಟಿಸಿದರು. ಸಹಗ್ರಂಥಪಾಲಕ ಶ್ರೀಮತಿ ಸೋಮಮ್ಮ ಪ್ರಾಸ್ತಾವಿಕ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಅರವಿಂದ ದೀಕ್ಷಿತ್ ಉಪಸ್ಥಿತರಿದ್ದರು. ಶ್ರೀಮತಿ ಶೋಭಾ ಪರಮೇಶ್ವರ ಪ್ರಾರ್ಥಿಸಿದರು. ಗ್ರಂಥಾಲಯ ಸಹಾಯಕ ಎಚ್.ಬಿ.ಮಹೇಶಪ್ಪ ಸ್ವಾಗತಿಸಿ, ನಿರ್ವಹಿಸಿದ್ದರು. ಗ್ರಂಥಾಲಯ ಸಹವರ್ತಿ ಬಿ.ಎಂ.ಸಿದ್ದಪ್ಪ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News