ನಾಗಮಂಗಲ: ವ್ಯಕ್ತಿಯ ಕೊಲೆಗೆ ಯತ್ನ

Update: 2017-11-14 15:16 GMT

ನಾಗಮಂಗಲ, ನ.14: ಹಾಡ ಹಗಲೇ ವ್ಯಕ್ತಿಯೋರ್ವನಿಗೆ ಜತೆಯಲ್ಲಿದ್ದವರೇ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸರುವ ಘಟನೆ ತಾಲೂಕಿನ ದೇವಲಾಪುರ ಹ್ಯಾಂಡ್ ಪೋಸ್ಟ್ ಬಳಿ ಮಂಗಳವಾರ ಬೆಳಗ್ಗೆ ನಡೆದಿದೆ.

ಬೆಂಗಳೂರಿನ ಹೊಸಕೆರೆಹಳ್ಳಿಯ ಮುನಿರಾಜು ಎಂಬವರ ಪುತ್ರ ಲೋಕೇಶ್(38) ಎಂಬವರು ಇರಿತಕ್ಕೊಳಗಾದ ವ್ಯಕ್ತಿಯೆಂದು ಗುರುತಿಸಲಾಗಿದ್ದು, ನಾಗಮಂಗಲದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸೇರಿಸಲಾಗಿದೆ.

ಘಟನೆ ವಿವಿರ: ತಾಲೂಕಿನ ಮಂಡ್ಯ ಮತ್ತು ದೇವಲಾಪುರ ರಸ್ತೆ ಕೂಡುವ ದೇವಲಾಪುರ ಹ್ಯಾಂಡ್ ಪೋಸ್ಟ್ ವೃತ್ತದ ಕೂಗಳತೆ ದೂರದಲ್ಲಿ ಈ ಘಟನೆ ನಡೆದಿದೆ. ಇರಿದವರು, ಇರಿತಕ್ಕೊಳಗಾದವನು ಬೆಂಗಳೂರಿನ ರೌಡಿಗಳಾಗಿದ್ದು, ಇತ್ತೀಚೆಗೆ ಜೈಲಿನಿಂದ ಬಿಡುಗಡೆ ಹೊಂದಿದ್ದರು ಎನ್ನಲಾಗಿದೆ.

ರೇಣು, ಶರವಣ, ಲೋಕೇಶ್, ಸ್ನೇಹಿತರು ಬೆಂಗಳೂರಿನಿಂದ ಕಾರಿನಲ್ಲಿ ಆಗಮಿಸಿದ್ದು, ರಸ್ತೆಪಕ್ಕದ ಅರಣ್ಯ ಪ್ರದೇಶಕ್ಕೆ ತೆರಳಿ ಲೋಕೇಶ್‍ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ತಕ್ಷಣ ತೆವಳಿಕೊಂಡು ರಸ್ತೆಗೆ ಬಂದ ಲೋಕೇಶ್‍ನನ್ನು ಸಾರ್ವಜನಿಕರು ಆಸ್ಪತ್ರೆಗೆ ಸೇರಿಸಿದ್ದಾರೆಂದು ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ, ಡಿವೈಎಸ್‍ಪಿ ಧರ್ಮೆಂದ್ರ, ಸಿಪಿಐ ಧನರಾಜ್ ಮತ್ತು ಪಿಎಸ್‍ಐ ಚಿದಾನಂದ್ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು. ಲೋಕೇಶ್‍ನ ಹೇಳಿಕೆಯಂತೆ ಪರಾರಿಯಾಗಿರುವ ರೇಣು, ಶರವಣ ಇತರರ ಮೇಲೆ  ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಲ್ಲಿ ಆತಂಕ: ಘಟನೆ ನಡೆದಿರುವ ಹ್ಯಾಂಡ್ ಪೋಸ್ಟ್ ವೃತ್ತದಲ್ಲಿ ಸರಕಾರಿ ಡಿಪ್ಲಮೋ, ಪಾಲಿಟೆಕ್ನಿಕ್ ಕಾಲೇಜು ಮತ್ತು ಹಾಸ್ಟೆಲ್‍ಗಳಿದ್ದು, ಘಟನೆಯಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಜತೆಗೆ ನಾಗಮಂಗಲ ಹಾಸುಪಾಸಿನ ಅರಣ್ಯ ಪ್ರದೇಶದಲ್ಲಿ ಈಚಿನ ದಿನಗಳಲ್ಲಿ ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರು ಆತಂಕಗೊಂಡಿದ್ದಾರೆ.

ಮಂಗಳೂರು-ಬೆಂಗಳೂರು 75 ರಾಷ್ಟ್ರೀಯ ಹೆದ್ದಾರಿ ಮತ್ತು ಶ್ರೀರಂಗಪಟ್ಟಣ ಬೀದರ್ ರಾಜ್ಯ ಹೆದ್ದಾರಿ  ಹಾಸುಪಾಸಿನ ಅರಣ್ಯ ಪ್ರದೇಶವನ್ನು ಕೊಲೆಗಳಿಗೆ ಆಯ್ಕೆಮಾಡಿಕೊಳ್ಳಲಾಗುತ್ತಿದೆ. ಕೆಲವು ತಿಂಗಳ ಹಿಂದೆ ಕದಬಹಳ್ಳಿ ಬಳಿ ಓರ್ವನನ್ನು ಮತ್ತು ಅಂಚೇಚಿಟ್ಟನಹಳ್ಳಿ  ಬಳಿ ಮತ್ತೋರ್ವನನ್ನು ಕೊಲೆ ಮಾಡಿಲಾಗಿತ್ತು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News