ಸಚಿವ ಜಾರ್ಜ್ ರಾಜೀನಾಮೆಗೆ ಬಿಜೆಪಿ ಪಟ್ಟು

Update: 2017-11-14 16:07 GMT

ಬೆಳಗಾವಿ, ನ.14: ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಬಿಐ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಪ್ರಕರಣ ದಾಖಲಿಸಿರುವ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪಟ್ಟು ಹಿಡಿದ ಪರಿಣಾಮ ವಿಧಾನಸಭೆ ಅರ್ಧದಿನದ ಕಲಾಪ ಬಲಿಯಾಯಿತು.

ಮಂಗಳವಾರ ವಿಧಾನಸಭೆ ಕಲಾಪ ಆರಂಭಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಕ್ಕೆ ಅವಕಾಶ ಕೋರಿ ಗದ್ದಲ ಸೃಷ್ಟಿಸಿದರು.

ಈ ವೇಳೆ ಪ್ರಶ್ನೋತ್ತರ ಕಲಾಪದ ಬಳಿಕ ಪ್ರಸ್ತಾಪಕ್ಕೆ ಅವಕಾಶ ನೀಡುವ ಭರವಸೆಯನ್ನು ಸ್ಪೀಕರ್ ಕೋಳಿವಾಡ ನೀಡಿದರು. ಹೀಗಾಗಿ ವಿಪಕ್ಷ ನಾಯಕ ಶೆಟ್ಟರ್ ಸೇರಿ ಬಿಜೆಪಿ ಸದಸ್ಯರು ಸುಮ್ಮನಾದರು.

ಪ್ರಶ್ನೋತ್ತರ ಕಲಾಪದ ಬಳಿಕ ಜಾರ್ಜ್ ರಾಜೀನಾಮೆಗೆ ಬಿಗಿ ಪಟ್ಟು ಹಿಡಿದ ಬಿಜೆಪಿ ಸದಸ್ಯರು, ಸಿಬಿಐ ತನಿಖೆ ಹಿನ್ನೆಲೆಯಲ್ಲಿ ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಈ ಹಂತದಲ್ಲಿ ಆಡಳಿತ ಮತ್ತು ವಿಪಕ್ಷಗಳ ಮಧ್ಯೆ ಗದ್ದಲ ಹೆಚ್ಚಾಯಿತು. ಹೀಗಾಗಿ ರೂಲಿಂಗ್ ನೀಡಿದ ಕೋಳಿವಾಡ ನಿಲುವಳಿ ಸೂಚನೆಯಡಿ ವಿಷಯ ಚರ್ಚೆಗೆ ಬರುವುದಿಲ್ಲ. ಸಿಬಿಐ ತನಿಖೆಗೆ ಪ್ರಗತಿಯಲ್ಲಿದ್ದು, ಈ ಪ್ರಕರಣದಲ್ಲಿ ರಾಜ್ಯ ಸರಕಾರದ ವೈಫಲ್ಯ ಕಾಣಿಸುತ್ತಿಲ್ಲ ಎಂದು ನಿಲುವಳಿ ಸೂಚನೆಯನ್ನು ತಿರಸ್ಕರಿಸಿದರು.

ಪ್ರಚಾರಕ್ಕಾಗಿ ಗದ್ದಲ: ಈ ನಡುವೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇವಲ ರಾಜಕೀಯ ಪ್ರಚಾರಕ್ಕಾಗಿ ಬಿಜೆಪಿ ಸದನದ ಅಮೂಲ್ಯ ಸಮಯವನ್ನು ಗದ್ದಲ ಸೃಷ್ಟಿಸಿ ಹಾಳು ಮಾಡುತ್ತಿದೆ. ಇವರಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಇಚ್ಛೆ ಇಲ್ಲ. ಜಾರ್ಜ್ ರಾಜೀನಾಮೆ ನೆಪದಲ್ಲಿ ಕಲಾಪದಲ್ಲಿ ಗದ್ದಲ ಮಾಡುತ್ತಿದ್ದಾರೆ. ಈ ವಿಷಯ ನಿಲುವಳಿ ಸೂಚನೆಯಲ್ಲಿ ಚರ್ಚೆಗೆ ಅರ್ಹವಲ್ಲ ಎಂದು ವಾಗ್ದಾಳಿ ನಡೆಸಿದರು.

ಬಳಿಕ ಆಡಳಿತ ಮತ್ತು ವಿಪಕ್ಷ ಸದಸ್ಯರ ಮಧ್ಯೆ ಗದ್ದಲ ಹೆಚ್ಚಾಗಿದ್ದರಿಂದ ಮಧ್ಯಾಹ್ನ 12ಗಂಟೆ ಸುಮಾರಿಗೆ ಕಲಾಪವನ್ನು ಭೋಜನ ವಿರಾಮಕ್ಕೆ ಸ್ಪೀಕರ್ ಕೋಳಿವಾಡ ಅವರು ಸದನವನ್ನು ಮುಂದೂಡಿದರು. ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಕಲಾಪ ಸಮಾವೇಶಗೊಂಡಾಗ ಪುನಃ ಸಚಿವ ಜಾರ್ಜ್ ರಾಜೀನಾಮೆ ವಿಷಯವನ್ನು ಮುಂದಿಟ್ಟುಕೊಂಡ ಸ್ಪೀಕರ್ ಪೀಠದ ಮುಂದಿನ ಭಾವಿಗಿಳಿದು ಬಿಜೆಪಿ ಧರಣಿ ನಡೆಸಿದ್ದರಿಂದ ಕಲಾಪ ಗೊಂದಲದ ಗೂಡಾಯಿತು.

ಈ ಮಧ್ಯೆ ನಾಲ್ಕು ವಿಧೇಯಕ ಮಂಡನೆ ಮಾಡಲಾಯಿತು. ಆ ಬಳಿಕ ಸದನವನ್ನು ನಾಳೆಗೆ ಮುಂದೂಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News