ಆರೋಪಿ ವಿರುದ್ಧದ ವಿಚಾರಣೆಗೆ ತಡೆ, ಹೆಣ್ಣೂರು ಠಾಣಾ ಇನ್ ಸ್ಪೆಕ್ಟರ್‌ಗೆ ಹೈಕೋರ್ಟ್ ನೋಟಿಸ್

Update: 2017-11-14 16:27 GMT

ಬೆಂಗಳೂರು, ನ.14: ವೀಸಾ ಅವಧಿ ಪೂರ್ಣಗೊಂಡರೂ ಸ್ವದೇಶಕ್ಕೆ ಮರಳದ ವಿದೇಶಿಗರಿಗೆ ವಾಸಿಸಲು ಮನೆ ನೀಡಿದ ಆರೋಪದ ಮೇಲೆ ಕಲ್ಯಾಣ ನಗರದ ಪಿ.ಅಶ್ವತ್ಥ ನಾರಾಯಣ ರೆಡ್ಡಿ ಎಂಬುವವರ ವಿರುದ್ಧ ಹೆಣ್ಣೂರು ಠಾಣಾ ಪೊಲೀಸರು ದಾಖಲಿಸಿದ್ದ ದೂರಿಗೆ ಹೈಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.

ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಿಸಿರುವ ದೂರು ರದ್ದುಪಡಿಸುವಂತೆ ಕೋರಿ ಅಶ್ವತ್ಥ ನಾರಾಯಣ ರೆಡ್ಡಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರರ ವಿರುದ್ಧ ದೂರಿನ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆಯಾಜ್ಞೆ ನೀಡಿತು. ಅಲ್ಲದೆ, ಪ್ರಕರಣದ ಕುರಿತು ಉತ್ತರಿಸಲು ಹೆಣ್ಣೂರು ಠಾಣಾ ಇನ್ಸ್‌ಪೆಕ್ಟರ್‌ಗೆ ನೋಟಿಸ್ ಜಾರಿ ಮಾಡಿದೆ.

ಅರ್ಜಿದಾರರ ಪರ ವಕೀಲ ಜಿ.ಆರ್.ಮೋಹನ್ ವಾದ ಮಂಡಿಸಿ, ಅರ್ಜಿದಾರ ಕಲ್ಯಾಣ ನಗರದಲ್ಲಿ ಜೆ.ಆರ್.ಆರ್ಕೆಡ್ ಎಂಬ ವಸತಿ ಅಪಾರ್ಟ್‌ಮೆಂಟ್ ನಿರ್ಮಾಣ ಮಾಡಿದ್ದಾರೆ. ಅದರಲ್ಲಿ ಆಫ್ರಿಕಾದ ಜೈರೆ ದೇಶದ ಪ್ರಜೆಗಳಾದ ಟಿಶಿಬಸು ಟಿಶಿಯೊಂಬೊ ಮತ್ತು ಟಿಶಿಬಂಡಾ ವನೀಸ್ಸಾ ಎಝೆಂಬಾ ಎಂಬುವರಿಗೆ ವಾಸಿಸಲು ಫ್ಲಾಟ್ ನೀಡಿದ್ದರು. ಆದರೆ, ವೀಸಾವಧಿ ಮುಗಿದರೂ ಭಾರತದಲ್ಲೇ ನೆಲೆಸಿದ ಆರೋಪದ ಮೇಲೆ ಹೆಣ್ಣೂರು ಪೊಲೀಸರು 2017ರ ಫೆ.5ರಂದು ಈ ವಿದೇಶಿಗರ ಮೇಲೆ ದೂರು ದಾಖಲಿಸಿದ್ದರು. ಆ ದೂರಿನಲ್ಲಿ ಅರ್ಜಿದಾರರನ್ನು ಆರೋಪಿಯನ್ನಾಗಿಸಿದ್ದಾರೆ ಎಂದು ದೂರಿದರು.

ಅಲ್ಲದೆ, 2016ರ ಸೆ.11ರಿಂದ 11 ತಿಂಗಳ ಕಾಲ ಬಾಡಿಗೆ ಮನೆ ನೀಡುವ ಸಂಬಂಧ ಅರ್ಜಿದಾರರು ವಿದೇಶಿಗರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನು ಪ್ರಕರಣ ಎದುರಿಸುತ್ತಿರುವ ವಿದೇಶಿಗರ ವಿದ್ಯಾರ್ಥಿ ವೀಸಾವನ್ನು 2017ರ ಜೂನ್ 30ರವರಿಗೆ ವಿಸ್ತರಿಸಲಾಗಿತ್ತು. ಇದನ್ನು ಸೂಕ್ತವಾಗಿ ಪರಿಶೀಲಿಸದ ಪೊಲೀಸರು ದೂರು ದಾಖಲಿಸಿ, 2017ರ ಫೆ.17ರಂದು ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ನ್ಯಾಯಪೀಠವನ್ನು ಕೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News