ತನಿಖೆ ನಡೆಸಿ ವರದಿ ಸಲ್ಲಿಸಲು ಸಚಿವ ಖಾದರ್ ಆದೇಶ

Update: 2017-11-14 17:03 GMT

ಶಿವಮೊಗ್ಗ, ನ.14: ರಾಜ್ಯದ ವಿವಿಧೆಡೆ ಆಹಾರ ಇಲಾಖೆಯ ಗೋದಾಮುಗಳಲ್ಲಿ ಸಾವಿರಾರು ಕ್ವಿಂಟಾಲ್ ಪಡಿತರ ಗೋಧಿ ಹುಳು-ಹುಪ್ಪಟೆ ಹಿಡಿದು ಹಾಳಾಗುತ್ತಿರುವ ಪ್ರಕರಣವನ್ನು ಆಹಾರ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತಂತೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ಆದೇಶ ಹೊರಡಿಸಿದ್ದಾರೆ.

ಸಂಬಂಧಿಸಿದ ಅಧಿಕಾರಿಗಳು ಎಚ್ಚರ ವಹಿಸಿದ್ದರೆ ಗೋಧಿ ಹಾಳಾಗುತ್ತಿರಲಿಲ್ಲ. ಪ್ರಾದೇಶಿಕ ಆಯುಕ್ತರು ತನಿಖೆ ನಡೆಸಿ ವರದಿ ಸಲ್ಲಿಸಿದ ನಂತರ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಆಹಾರ ಇಲಾಖೆ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ ರಾತ್ರಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಗ್ರಾಹಕರ ಬೇಡಿಕೆ ಹಿನ್ನೆಲೆಯಲ್ಲಿ ಗೋಧಿ ಪ್ರಮಾಣ ಕಡಿತಗೊಳಿಸಿ ಅಕ್ಕಿ ವಿತರಣೆ ಹೆಚ್ಚಿಸಲಾಗಿತ್ತು. ಆದರೆ ಈ ವೇಳೆಗಾಗಲೇ ಗೋದಾಮುಗಳಿಗೆ ಪೂರೈಕೆಯಾಗಿದ್ದ ಗೋಧಿಯನ್ನು ಯಾರ ಗಮನಕ್ಕೂ ತರದೆ ಹಾಗೆಯೇ ಉಳಿಸಿಕೊಳ್ಳಲಾಗಿತ್ತು ಎಂದರು.

ಇದರಿಂದಾಗಿ ಕೆಲ ಜಿಲ್ಲೆಗಳಲ್ಲಿ ಹಲವು ತಿಂಗಳ ಕಾಲ ಗೋಧಿ ದಾಸ್ತಾನು ಉಳಿದುಕೊಂಡಿತ್ತು. ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಿ ವಿಲೇ ಮಾಡಿದ್ದಲ್ಲಿ ಗೋಧಿ ಹಾಳಾಗುತ್ತಿರಲಿಲ್ಲ ಎಂದು ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟಿದ್ದಾರೆ. ಅಂತಿಮ: ಪಡಿತರ ಚೀಟಿಗಾಗಿ ಈಗಾಗಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ಬಿಪಿಎಲ್ ಕುಟುಂಬದ ಸದಸ್ಯರಿಗೆ ಡಿಸೆಂಬರ್ ಮಾಸಾಂತ್ಯದೊಳಗಾಗಿ ರಿಜಿಸ್ಟರ್ ಅಂಚೆ ಮೂಲಕ ಪಡಿತರ ಚೀಟಿಯನ್ನು ತಲುಪಿಸಲಾಗುವುದು ಎಂದರು.

ಸರಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಪಡಿತರ ಚೀಟಿಯ ಅಗತ್ಯವಿರುವ ಕುಟುಂಬಗಳ ಮುಖ್ಯಸ್ಥರು ವಾಸ್ತವ ಸ್ಥಿತಿಯನ್ನು ಅಧಿಕಾರಿಗಳ ಗಮನಕ್ಕೆ ತಂದಲ್ಲಿ ತ್ವರಿತಗತಿಯಲ್ಲಿ ಪಡಿತರ ಕಾರ್ಡ್‌ನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಪಡಿತರ ಚೀಟಿದಾರರು ನೀಡುವ ಬಯೋಮೆಟ್ರಿಕ್ ಸಹಿ ಕೆಲವೊಮ್ಮೆ ಹೋಲಿಕೆಯಾಗದೆ ಪಡಿತರ ನೀಡುವಲ್ಲಿ ಅಡಚಣೆ ಉಂಟು ಮಾಡುತ್ತಿರುವ ವಿಷಯ ಗಮನಕ್ಕೆ ಬಂದಿದೆ. ಅಂತಹ ಪ್ರಕರಣಗಳನ್ನು ಇತ್ಯರ್ಥಪಡಿಸಲು ಅಂಗಡಿ ಮಾಲಕರಿಗೆ ಶೇ.2ರಷ್ಟು ಪ್ರಕರಣಗಳಲ್ಲಿ ರಿಯಾಯಿತಿ ನೀಡಲಾಗಿದೆ ಎಂದು ಹೇಳಿದರು.

ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಪಡಿತರ ಪಡೆದು ವಿತರಿಸುವ ವಿತರಕ, ತನ್ನ ಜವಾಬ್ದಾರಿಯನ್ನು ಅನ್ಯವ್ಯಕ್ತಿಗೆ ಹಸ್ತಾಂತರಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಸಂಬಂಧಿಸಿದ ವ್ಯಕ್ತಿಯೇ ಖುದ್ದಾಗಿ ಸಗಟು ಆಹಾರ ಘಟಕಕ್ಕೆ ಭೇಟಿ ನೀಡಿ, ಬಯೋಮೆಟ್ರಿಕ್ ಸಹಿ ನೀಡಿ, ಪಡಿತರ ಧಾನ್ಯಗಳನ್ನು ಪಡೆಯಬೇಕು. ಈ ರೀತಿಯಲ್ಲಿ ಪಡೆದ ಆಹಾರಧಾನ್ಯವನ್ನು ಸರಬರಾಜು ಮಾಡುವ ವಾಹನಕ್ಕೆ ಜಿಪಿಎಸ್ ಸಾಧನ ಅಳವಡಿಸಲಾಗುವುದು ಎಂದು ಅವರು ನುಡಿದರು.

ಅಶಕ್ತರು ಹಾಗೂ ವಿಕಲಚೇತನರಿಗೆ ಉಚಿತ ಆಹಾರ ಮತ್ತು ವಸತಿ ನೀಡಿರುವ ಸಂಘ-ಸಂಸ್ಥೆಗಳಿಗೆ ಪ್ರತಿವ್ಯಕ್ತಿ ತಲಾ 15 ಕೆ.ಜಿ.ಯಂತೆ ಆರು ತಿಂಗಳು ಅವಧಿಯ ಆಹಾರ ಧಾನ್ಯವನ್ನು ಉಚಿತವಾಗಿ ಏಕಕಾಲದಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ರೀತಿ ಜಿಲ್ಲೆಯ ಸುಮಾರು 16 ಸಂಸ್ಥೆಗಳು ಆಹಾರವನ್ನು ಪಡೆದುಕೊಳ್ಳುತ್ತಿವೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News