ಕೆಪಿಎಂಇ ವಿಧೇಯಕ ಮಂಡಿಸಿದರೆ ಖಾಸಗಿ ಆಸ್ಪತ್ರೆ ಬಂದ್: ಡಾ.ಧನಂಜಯ ಸರ್ಜಿ

Update: 2017-11-14 17:07 GMT

ಶಿವಮೊಗ್ಗ, ನ.14: ಪ್ರಸ್ತುತ ವಿಧಾನಮಂಡಲ ಅಧಿವೇಶನದಲ್ಲಿ ವಿವಾದಿತ ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ಕಾಯ್ದೆ (ಕೆಪಿಎಂಇ) ತಿದ್ದುಪಡಿ ವಿಧೇಯಕ ಮಂಡಿಸಿದರೆ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿರುವ ಸುಮಾರು 90ಕ್ಕೂ ಅಧಿಕ ಖಾಸಗಿ ಆಸ್ಪತ್ರೆಗಳ ಕಾರ್ಯನಿರ್ವಹಣೆಯನ್ನು ಅನಿರ್ದಿಷ್ಟಾವದಿವರೆಗೆ ಸ್ಥಗಿತಗೊಳಿಸಲಾಗುವುದು ಎಂದು ಶಿವಮೊಗ್ಗ ನಗರದ ವೈದ್ಯ ಡಾ.ಧನಂಜಯ ಸರ್ಜಿ ತಿಳಿಸಿದ್ದಾರೆ.

ಮಂಗಳವಾರ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತಿದ್ದುಪಡಿ ಕಾಯ್ದೆ ಜಾರಿಯ ಬಗ್ಗೆ ಖಾಸಗಿ ಆಸ್ಪತ್ರೆಗಳ ವಿರೋಧವಿಲ್ಲ. ಆದರೆ, ಅದರಲ್ಲಿರುವ ಕೆಲ ವಿಷಯಗಳ ಬಗ್ಗೆ ಮಾತ್ರ ಆಕ್ಷೇಪವಿದೆ. ಈ ಕುರಿತು ಪರಿಷ್ಕರಣೆ ನಡೆಸುವಂತೆ ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.

ವಿಧೇಯಕದಲ್ಲಿರುವ ಕೆಲ ಅಂಶಗಳಿಂದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವಂತದ್ದಾಗಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ವಿವಾದಿತ ಅಂಶಗಳ ಪರಿಷ್ಕರಣೆ ಮಾಡಲೇಬೇಕಾಗಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಒಂದು ವೇಳೆ ಪರಿಷ್ಕರಣೆಯಿಲ್ಲದೆ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡನೆಯಾದರೆ, ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ. ಅದರಂತೆ ಶಿವಮೊಗ್ಗ ನಗರ ಹಾಗೂ ಜಿಲ್ಲೆಯಲ್ಲಿಯೂ ಪ್ರತಿಭಟನೆ ನಡೆಸಲಾಗುವುದು. ಸಾರ್ವಜನಿಕರಿಗೆ ಉಂಟಾಗುವ ತೊಂದರೆಗೆ ಸರಕಾರವೇ ಹೊಣೆಯಾಗಬೇಕಾಗುತ್ತದೆ ಎಂದರು.

ಪಶ್ಚಿಮಬಂಗಾಳ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಿಸಿದಂತೆ ಕಠಿಣ ನಿಯಮಗಳಿವೆ. ಈ ಕಾರಣದಿಂದಲೇ ಆ ರಾಜ್ಯದಲ್ಲಿ ಖಾಸಗಿ ಆಸ್ಪತ್ರೆಗಳ ಸ್ಥಾಪನೆಗೆ ವೈದ್ಯರು ಮುಂದಾಗುತ್ತಿಲ್ಲ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಆ ರಾಜ್ಯದ ರೋಗಿಗಳು ಕರ್ನಾಟಕ ಮತ್ತೀತರ ರಾಜ್ಯಗಳಿಗೆ ಆಗಮಿಸಿ ಚಿಕಿತ್ಸೆ ಪಡೆದುಕೊಳ್ಳುವಂತಹ ಸ್ಥಿತಿಯಿದೆ. ಈ ತಿದ್ದುಪಡಿ ಕಾಯ್ದೆ ಜಾರಿಯಾದರೆ ರಾಜ್ಯದಲ್ಲಿಯೂ ಕೂಡಾ ಅರ್ಧದಷ್ಟು ಖಾಸಗಿ ಆಸ್ಪತ್ರೆಗಳು ಬಾಗಿಲು ಮುಚ್ಚುವುದು ನಿಶ್ಚಿತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News