ದೇಶದಲ್ಲಿ ಮನುವಾದ ಹೇರುವ ಪ್ರಯತ್ನ ಖಂಡನೀಯ: ರಾಚಪ್ಪ

Update: 2017-11-14 17:51 GMT

ಸೊರಬ, ನ.14: ಚುನಾವಣಾ ಪೂರ್ವ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಪ್ರೊ. ರಾಚಪ್ಪಆರೋಪಿಸಿದ್ದಾರೆ.

ಮಂಗಳವಾರ ಪಟ್ಟಣದ ಪ್ರವಾಸಿಮಂದಿರದಲ್ಲಿ ತಾಲೂಕು ಬಿಎಸ್ಪಿ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆ ಹಾಗೂ ವಿವಿಧ ಪಕ್ಷಗಳಿಂದ ಬಿಎಸ್ಪಿಗೆ ಸೇರ್ಪಡೆಗೊಂಡ ಕಾರ್ಯಕರ್ತರನ್ನು ಬರಮಾಡಿಕೊಂಡು ಅವರು ಮಾತನಾಡಿದರು.

ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಕಾಳಧನ ನಿಯಂತ್ರಣ, ಗಡಿಯಾಚೆಗಿನ ಭಯೋತ್ಪಾದನಾ ಕೃತ್ಯ ನಿಯಂತ್ರಿಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ನೋಟು ಅಪಮೌಲ್ಯೀಕರಣದಿಂದಾಗಿ ದೇಶದ ಬಡವರು, ರೈತರು ಹಾಗೂ ಸಾಮಾನ್ಯವರ್ಗದ ಜನರು ನೆಮ್ಮದಿಯ ಜೀವನ ನಡೆಸದೇ ಪರದಾಡುವಂತಾಗಿದೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಮೋದಿ ಸರಕಾರ ಜಾಣ ಕುರುಡುತನದಿಂದ ವರ್ತಿಸುತ್ತಿದೆ ಎಂದರು.

ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದಾಗಿನಿಂದ ಅಂಬೇಡ್ಕರ್, ನಾರಾಯಣಗುರು, ಜ್ಯೋತಿಬಾ ಫುಲೆ, ಶಾಹು ಮಹಾರಾಜ್ ಸೇರಿದಂತೆ ಅನೇಕ ಚಿಂತಕರ ದಾರ್ಶನಿಕರ ಚಿಂತನೆಗಳನ್ನು ಗಾಳಿಗೆ ತೂರಿ ಮನುವಾದಿ ಸಿದ್ಧಾಂತವನ್ನು ಜನರ ಮೇಲೆ ಹೇರಲು ಪ್ರಯತ್ನಿಸುತ್ತಿರುವುದನ್ನು ಪ್ರತಿಯೊಬ್ಬರೂ ಖಂಡಿಸಬೇಕಾಗಿದೆ. ದಲಿತರು ಹಾಗೂ ಹಿಂದುಳಿದವರ ಸಮಸ್ಯೆಯನ್ನು ಪರಿಹರಿಸುವಲ್ಲಿ ರಾಜ್ಯ ಸರಕಾರವೂ ವಿಫಲವಾಗಿದೆ ಎಂದರು.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರಗಳಿಂದ ಇಬ್ಬರು ಅಭ್ಯರ್ಥಿಗಳನ್ನು ಪಕ್ಷದ ವತಿಯಿಂದ ಕಣಕ್ಕಿಳಿಸಲಾಗುವುದು. ಅವಶ್ಯಕತೆ ಬಿದ್ದಲ್ಲಿ ಮತ್ತೊಬ್ಬ ಅಭ್ಯರ್ಥಿಯನ್ನು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ. ಬಿಎಸ್ಪಿ ರಾಷ್ಟ್ರೀಯ ಅಧ್ಯಕ್ಷೆ ಮಾಯಾವತಿ ಅವರು ನ.26ರಂದು ಬೆಂಗಳೂರಿಗೆ ಆಗಮಿಸಿ, ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂದು ನಡೆಯುವ ಕಾರ್ಯಕ್ರಮಕ್ಕೆ ಕಾರ್ಯಕರ್ತರು, ಪಕ್ಷದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 40ಕ್ಕೂ ಹೆಚ್ಚು ಕಾರ್ಯಕರ್ತರು ಬಿಎಸ್ಪಿಗೆ ಸೇರ್ಪಡೆಗೊಂಡರು.
ಸಭೆಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಡಿ. ಶಿವಪ್ಪ, ತಾಲೂಕು ಅಧ್ಯಕ್ಷ ಎಲ್.ಜಿ. ಗುಡ್ಡಪ್ಪ, ಪ್ರಮುಖರಾದ ನಾರಾಯಣಪ್ಪ, ಲಕ್ಷ್ಮಣರಾವ್, ಫಕ್ಕೀರಯ್ಯ ಸಿದ್ದಯ್ಯ ಹಿರೇಮಠ್ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News