ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ನ.20, 21ರಂದು ದಿಲ್ಲಿ ಮುತ್ತಿಗೆ: ದುಗ್ಗಪ್ಪ ಗೌಡ

Update: 2017-11-14 17:53 GMT

ಚಿಕ್ಕಮಗಳೂರು, ನ.14: ದೇಶದ ಎಲ್ಲಾ ರೈತರ ಸಾಲ ಮನ್ನಾ ಮಾಡುವುದು ಸಹಿತ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನ.20 ಮತ್ತು 21ರಂದು ದಿಲ್ಲಿ ಮುತ್ತಿಗೆಗೆ ಜಿಲ್ಲೆಯಿಂದ 500 ರೈತರು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಚಿಕ್ಕಮಗಳೂರು ಜಿಲ್ಲಾ ಶಾಖೆ ತಿಳಿಸಿದೆ.

ಮಂಗಳವಾರ ಈ ಕುರಿತು ರೈತ ಸಂಘದ ಡಿ.ಆರ್.ದುಗ್ಗಪ್ಪಗೌಡ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 175ಕ್ಕೂ ಹೆಚ್ಚು ರೈತ ಸಂಘಟನೆಗಳ ಮಹಾ ಒಕ್ಕೂಟ ಹಾಗೂ ಅಖಿಲ ಭಾರತ ರೈತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನ.20ರಂದು ದಿಲ್ಲಿ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ. ದೇಶದ ಎಲ್ಲಾ ರೈತರು ಸಾಲ ಮುಕ್ತರಾಗಬೇಕು. ರಾಷ್ಟ್ರೀಯ ರೈತ ಅಯೋಗ ವರದಿಯ ಜಾರಿ, ಬೆಂಬಲ ಬೆಲೆ, ದಲ್ಲಾಳಿ ರಹಿತ ಉತ್ತಮ ಮಾರುಕಟ್ಟೆ ವ್ಯವಸ್ಥೆ, ಬಹುರಾಷ್ಟ್ರೀಯ ಕಂಪೆನಿಗಳ ಹಿಡಿತದಿಂದ ರೈತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು. ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದಷ್ಟೇ ಪ್ರಧಾನ ಕಾಳಜಿಯಾಗಿದೆ ವಿನಃ ಸಾಯುವ ಸ್ಥಿತಿಯಲ್ಲಿರುವ ರೈತರ ಪಡಿಪಾಟಿಲು ಕೇಳಲು ಪುರುಸೊತ್ತಿಲ್ಲ ಎಂದಿದ್ದಾರೆ.
ಕರ್ನಾಟಕದ ಶೇ.21ರಷ್ಟು ರೈತರು ಸಹಕಾರಿ ಬ್ಯಾಂಕುಗಳಲ್ಲಿ 10 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ. ಶೇ.79 ರಷ್ಟು ರೈತರು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಸುಮಾರು 36 ಸಾವಿರ ಕೋಟಿ ಸಾಲ ಮಾಡಿದ್ದಾರೆ. ರಾಷ್ಟ್ರೀಕೃತ ಹಾಗೂ ಸಹಕಾರ ಸಂಘಗಳ ಸಂಪೂರ್ಣ ಸಾಲಮನ್ನಾ ಮಾಡುವ ನಿರ್ಧಾರವನ್ನು ಕೇಂದ್ರ ಸರಕಾರ ತೆಗೆದುಕೊಳ್ಳಬೇಕೆಂದು ಅವರು ಹೇಳಿದರು.
ಕೆಲವು ಉದ್ದಿಮೆದಾರರ 42 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿರುವಂತೆ ಸರಕಾರಗಳು ದೇಶದ ರೈತರ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಧರಣಿ ನಡೆಯಲಿದೆ ಎಂದು ತಿಳಿಸಿದ್ದಾರೆ. ಈ ಸಂದಭರ್ದಲ್ಲಿ ಪ್ರಮುಖರಾದ ಕೆ.ಎಸ್.ನಾಗರಾಜ್, ಮಂಜೇಗೌಡ ಹಾಗೂ ನಿರಂಜನ ಮೂರ್ತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News