ಗೋ ಮಧುಸೂಧನ್ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಆಗ್ರಹಿಸಿ ದಸಂಸ ಅಹೋ ರಾತ್ರಿ ಧರಣಿ

Update: 2017-11-14 18:10 GMT

ಮೈಸೂರು, ನ.14: ದಲಿತ ವಿರೋಧಿ ಗೋ.ಮಧುಸೂಧನ್ ವಿರುದ್ಧ ಕೂಡಲೇ ಎಫ್ ಐಆರ್ ದಾಖಲು ಮಾಡಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ಮಾಡುವ ಮೂಲಕ ಅಹೋ ರಾತ್ರಿ ಧರಣಿ ನಡಿಸಿದರು.

ನಗರದ ಕೆ.ಆರ್.ಪೊಲೀಸ್ ಠಾಣೆ ಎದುರು ಮಂಗಳವಾರ ಸಂಜೆ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು, ಸಂವಿಧಾನದಲ್ಲಿ ಟಿಪ್ಪು ಸುಲ್ತಾನ್‍ನನ್ನು ಸ್ವಾತಂತ್ರ್ಯ ಸೇನಾನಿ ಎಂದು ನಮೂದಿಸಿದ್ದಲ್ಲಿ ಅಂತಹ ಸಂವಿಧಾನವನ್ನು ನಾನು ಒಪ್ಪುವುದಿಲ್ಲ ಎಂದು ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಹೇಳಿಕೆ ಗೋ.ಮಧುಸೂಧನ್ ಹೇಳಿಕೆ ನೀಡಿರುವುದು ಖಂಡನೀಯ ಆತನನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನಗ ಬಗ್ಗೆ ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆಯು ಅಂಬೇಡ್ಕರ್ ಅವರು ಹುಟ್ಟಿದ ದಿನವನ್ನು “ವಿಶ್ವ ಜ್ಞಾನದ ದಿನ”ವನ್ನಾಗಿ ಆಚರಿಸುತ್ತಿದೆ. ವಾಸ್ತವ ಹೀಗಿರುವಾಗ ಮಧುಸೂಧನ್ ಅವರು ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದರು.

ಇಂತಹ ಹೇಳಿಕೆ ನೀಡುವ ಮೂಲಕ ಅವರು ರಾಷ್ಟ್ರದ ಐಕ್ಯತೆಗೆ ಧಕ್ಕೆ ತಂದಿದ್ದಾರೆ. ಅಂಬೇಡ್ಕರ್ ಅವರು ಹಿಂದುಳಿದ ಜಾತಿಗೆ ಸೇರಿದವರು ಎಂಬ ಕಾರಣಕ್ಕಾಗಿ ಮನುವಾದಿಗಳು ಇಂತಹ ಹೇಳಿಕೆಗಳನ್ನು ನಿರಂತರವಾಗಿ ನೀಡುತ್ತಾ ಸಮಾಜದಲ್ಲಿ ಅಶಾಂತಿಯ ವಾತಾವರಣ ಮೂಡುತ್ತದೆ ಎಂಬ ಕನಿಷ್ಠ ಜ್ಞಾನವೂ ಮಧುಸೂಧನ್ ಅವರಿಗೆ ಇಲ್ಲ ಎಂದು ಕಿಡಿಕಾರಿದರು.

ಸಂವಿಧಾನವನ್ನು ಒಪ್ಪಲು ಸಾಧ್ಯವಿಲ್ಲ. ಇದೊಂದು ಸುಳ್ಳಿನ ಸಂವಿಧಾನವೆಂದು ಹೇಳಿಕೆ ನೀಡುವ ಮೂಲಕ ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ಉಂಟು ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿ, ಅರಾಜಕತೆ ಸೃಷ್ಟಿಗೆ ಕಾರಣರಾಗಿದ್ದಾರೆ ಎಂದು ಧರಣಿನಿರತರರು ಆರೋಪಿಸಿದರು.

ಕೂಡಲೇ ಮಧುಸೂಧನ್‍ನನ್ನು ಬಂದಿಸಬೇಕು, ಆತನ ವಿರುದ್ಧ ಪ್ರಕರಣ ದಾಖಲಿಸಿ ಆತನನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News