ಪ್ರತೀ ತಾಲೂಕಿನಲ್ಲಿ 20 ಮೆ.ವ್ಯಾ.ಸೌರ ವಿದ್ಯುತ್ ಉತ್ಪಾದನೆ: ಡಿ.ಕೆ.ಶಿವಕುಮಾರ್

Update: 2017-11-14 18:25 GMT

ಬೆಳಗಾವಿ, ನ.14: ರಾಜ್ಯದ ಪ್ರತೀ ತಾಲೂಕಿನಲ್ಲಿ ತಲಾ 20 ಮೆಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ಶೀಘ್ರವೇ ಟೆಂಡರ್ ಪ್ರಕ್ರಿಯೆಯನ್ನು ಆರಂಭಿಸಲಾಗವುದು ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಮಂಗಳವಾರ ವಿಧಾನಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ವಿಜಯಸಿಂಗ್ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಅವರು, ಮಲೆನಾಡು ಪ್ರದೇಶ ಹೊರತುಪಡಿಸಿ 130 ರಿಂದ 140 ತಾಲೂಕುಗಳಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಗುವುದು ಜಾರಿಗೆ ತರಲಾಗುವುದು ಎಂದರು.

ಕರ್ನಾಟಕ ಸೌರಶಕ್ತಿ ಅಭಿವೃದ್ಧಿ ನಿಗಮ ನಿಯಮಿತವು (ಕೆಎಸ್‍ಪಿಡಿಸಿಎಲ್) ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ ಮತ್ತು ಸೋಲಾರ್ ಎನರ್ಜಿ ಕಾರ್ಪೊರೇಷನ್ ಆಫ್ ಇಂಡಿಯಾ ಸಹಯೋಗದೊಂದಿಗೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನಾಗಲಮಡಿಕೆ ಹೋಬಳಿಯ 5 ಗ್ರಾಮಗಳ ವ್ಯಾಪ್ತಿಯಲ್ಲಿ 2,000 ಮೆಗಾವ್ಯಾಟ್ ಸಾಮರ್ಥ್ಯದ ಸೌರ ಪಾರ್ಕ್‍ನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.

ಪ್ರಸ್ತುತ ಬೀದರ್ ಜಿಲ್ಲೆಯಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ. ಸರಕಾರದಿಂದ ಖಾಸಗಿ ಅಭಿವೃದ್ಧಿದಾರರಿಗೆ ಖಾಸಗಿ ಸೋಲಾರ್ ಪಾರ್ಕ್ ಯೋಜನೆಯಡಿ ಇದುವರೆಗೆ ಒಟ್ಟು 382 ಮೆಗಾವ್ಯಾಟ್ ಸಾಮರ್ಥ್ಯದ 9 ಖಾಸಗಿ ಸೋಲಾರ್ ಪಾರ್ಕ್‍ಗಳನ್ನು ನಿರ್ಮಿಸಲು ಸ್ವತಂತ್ರ ವಿದ್ಯುತ್ ಉತ್ಪಾದಕರಿಗೆ ಅನುಮೋದನೆ ನೀಡಲಾಗಿದೆ. ಅವುಗಳಲ್ಲಿ ಈವರೆಗೆ 2 ಘಟಕಗಳಿಂದ 58.43 ಮೆ.ವ್ಯಾಟ್ ಸಾಮರ್ಥ್ಯದ ಯೋಜನೆ ಅನುಷ್ಠಾನಗೊಂಡಿದೆ ಎಂದರು.  

ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಸೌರಪಾರ್ಕ್‍ಗೆ ವಳ್ಳೂರು, ರಾಯಚೆರ್ಲು, ಕ್ಯಾತಗಾನಚೆರ್ಲು, ಬಳಸಮುದ್ರ ಹಾಗೂ ತಿರುಮಣಿ ವ್ಯಾಪ್ತಿಯ 5 ಗ್ರಾಮಗಳ ರೈತರಿಂದ ಜಮೀನುಗಳನ್ನು ವರ್ಷಕ್ಕೆ ಪ್ರತೀ ಎಕರೆಗೆ ರೂ.21 ಸಾವಿರ ರೂ.ಗಳಂತೆ 28 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿದೆ. ಈ ಗುತ್ತಿಗೆ ದರವು ಪ್ರತಿ 2 ವರ್ಷಕ್ಕೊಮ್ಮೆ ಮೂಲದರದ ಶೇ.5ರಷ್ಟು ಹೆಚ್ಚುವರಿಯಾಗಲಿದೆ ಎಂದು ವಿವರಿಸಿದರು.

ಖಾಸಗಿ ಸೌರಪಾರ್ಕ್ ಸ್ಥಾಪನೆಗೆ ಅಭಿವೃದ್ಧಿದಾರರೇ ಜಮೀನುಗಳನ್ನು ಗುರುತಿಸಿ ಯೋಜನೆ ಅನುಷ್ಠಾನಗೊಳಿಸುತ್ತಾರೆ. ಆದ್ದರಿಂದ ಸರಕಾರದ ಯಾವುದೇ ಪರಿಹಾರವನ್ನು ರೈತರಿಗೆ ನೀಡುವುದಿಲ್ಲ. ರಾಜ್ಯ ಸರಕಾರವು ಪಾವಗಡ ಸೋಲಾರ ಪಾರ್ಕ್ ಮಾಡಲು ಯಾವುದೇ ಅನುದಾನ ನೀಡಿಲ್ಲ. ಭಾರತ ಸರಕಾರದ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು ಪ್ರತಿ ಮೆಗಾವ್ಯಾಟ್‍ಗೆ 20ಲಕ್ಷ ರೂ.ಅಥವಾ ವಿಸ್ತøತ ಯೋಜನಾ ವರದಿಯ ವೆಚ್ಚದ ಶೇ.30ರಷ್ಟು ಇವೆರಡರಲ್ಲಿ ಯಾವುದು ಕಡಿಮೆಯೋ ಅದನ್ನು ನೀಡಲಿದೆ. ಅದರಂತೆ ಈವರೆಗೆ 180ಕೋಟಿ ರೂ.ಗಳನ್ನು ಕೆಎಪಿಡಿಸಿಎಸ್‍ಲ್ ಸಂಸ್ಥೆಗೆ ಅನುದಾನ ಬಂದಿದೆ ಎಂದು ಶಿವಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News