ಕೊಡ್ಲಿಪೇಟೆಯಲ್ಲಿ ಗೋ ಮಧುಸೂದನ್ ವಿರುದ್ಧ ಪ್ರತಿಭಟನೆ
ಕೊಡ್ಲಿಪೇಟೆ, ನ.15: ರಾಜ್ಯ ಬಿಜೆಪಿ ಮುಖಂಡ ಗೋ ಮಧುಸೂದನ್ ಸಂವಿಧಾನ ವಿರುದ್ಧ ಹೇಳಿಕೆ ನೀಡಿರುವುದನ್ನು ಖಂಡಿಸಿ ದಲಿತ ಸಂಘಟನೆಗಳು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಪ್ರತಿಭಟನಕಾರರು, ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ರಚಿಸಿ ಬಿಜೆಪಿ ಹಾಗೂ ಗೋ ಮಧುಸೂದನ್ ವಿರುದ್ಧ ಧಿಕ್ಕಾರ ಘೋಷಣೆಗಳನ್ನು ಕೂಗಿ ಪ್ರತಿಕೃತಿ ದಹಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಕಾರರು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಜನವಿರೋಧಿ ನೀತಿಗಳಾದ ನೋಟ್ ಬ್ಯಾನ್ ಮತ್ತು ಜಿಎಸ್‍ಟಿ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳು ಎನ್ನುವ ಬಿಜೆಪಿಗರು ದೇಶದ ಸಂವಿಧಾನವನ್ನು ವಿರೋಧಿಸುವ ಮೂಲಕ ನೈಜ ದೇಶದ್ರೋಹಿಗಳಾಗಿದ್ದಾರೆ ಎಂದು ಆಕ್ರೋಶ ವ್ತಕ್ತಪಡಿಸಿದರು.
ಈ ಸಂದರ್ಭ ದಲಿತ ಮುಖಂಡರಾದ ನಿರ್ವಾಣಪ್ಪ, ಸೋಮಣ್ಣ, ಕಾಳಯ್ಯ, ಗುರುಮೂರ್ತಿ, ರಾಜೇಶ್ ಹಾಗೂ ಯುವ ಕಾಂಗ್ರೆಸ್ ಪ್ರಮುಖರಾದ ಮೊಹಮ್ಮದ್ ಹನೀಫ್, ವಸಂತ್, ವಸೀಂ ಸೇರಿದಂತೆ ಮತ್ತಿತರರು ಇದ್ದರು.