ತಮ್ಮನ ಕೊಲೆ ಪ್ರಕರಣ: ಅಪರಾಧಿಗೆ ಜೀವಾವಧಿ ಶಿಕ್ಷೆ
ಶಿವಮೊಗ್ಗ, ನ.15: ತನ್ನ ಅಂಗವಿಕಲ ತಮ್ಮನನ್ನು ಇನ್ಸೂರನ್ಸ್ ಆಸೆಗಾಗಿ ಕೊಲೆ ಮಾಡಿದ ಅಣ್ಣ ಕುಮಾರ ಬಿನ್ ಈಶ್ವರಪ್ಪ ಎಂಬ ಆರೋಪಿಗೆ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ 3ನೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹರೀಶ್ ಎ.ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25.000 ರೂ.ದಂಢ ವಿಧಿಸಿ ತೀರ್ಪು ನೀಡಿದ್ದಾರೆ.
ಶಿಕಾರಿಪುರ ತಾ. ಅಮಟೇಕೊಪ್ಪ ಗ್ರಾಮದ ಕುಮಾರ್ ಎಂಬ ಅಪರಾಧಿ 2015ರ ಏಪ್ರಿಲ್‍ನಲ್ಲಿ ತನ್ನ ಅಂಗವಿಕಲ ತಮ್ಮ ಉಮೇಶನಿಗೆ ಆಕ್ಸಿ ಡೆಂಟ್ ಬೆನಿಫಿಟ್‍ನಲ್ಲಿ 45 ಲಕ್ಷ ರೂ.ಗಳ ಇನ್ಸೂರನ್ಸ್ ಪಾಲಿಸಿ ಮಾಡಿಸಿ, ಒಂದು ವರ್ಷದ ಒಳಗೆ ಸತ್ತರೆ 45 ಲಕ್ಷ ಹಣ ಬರುತ್ತದೆ ಎಂಬ ದುರಾಶೆಯಿಂದ ಹುಲ್ಲು ಲೋಡ್‍ಗೆಂದು ಐಷರ್ ಕ್ಯಾಂಟರ್‍ನಲ್ಲಿ ಕರೆದುಕೊಂಡು ಶೆಟ್ಟಿಹಳ್ಳಿ ಮತ್ತು ಕಣಿವೆಮನೆ ಮಧ್ಯೆ ಇರುವ ಬ್ರಿಡ್ಜ್ ಹತ್ತಿರ ಕೆಳಗೆ ಇಳಿಸಿ ಕ್ಯಾಂಟರ್ ಲೈಟ್ ಸರಿಪಡಿಸುವಂತೆ ವಾಹನದ ಕೆಳಗಡೆ ಮಲಗಿಸಿ ಆತನ ಮೇಲೆ ವಾಹನವನ್ನು ಹತ್ತಿಸಲು ಪ್ರಯತ್ನಿಸಿ ಆತ ತಪ್ಪಿಸಿಕೊಂಡಾಗ ಕಬ್ಬಿಣದ ರಾಡ್‍ನಿಂದ ಹೊಡೆದು ಕೆಳಗುರುಳಿಸಿ ನಂತರ ತಲೆ ಮೇಲೆ ಕ್ಯಾಂಟರ್ ಹತ್ತಿಸಿ ಅಪಘಾತವಾದಂತೆ ಬಿಂಬಿಸಿ, ಸಾಕ್ಷ್ಯಾಧಾರವನ್ನು ನಾಶಮಾಡಿದ್ದಾನೆ ಎಂಬ ಆರೋಪ ಮೇಲೆ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಕೇಸನ್ನು ದಾಖಲಿಸಿಕೊಂಡು ತನಿಖೆ ಪೂರೈಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸರ್ಕಾರದ ಪರವಾಗಿ ಸರಕಾರಿ ಅಭಿಯೋಜಕ ಜೆ. ಶಾಂತರಾಜ್ ಕೇಸಿನ ವಿಚಾರಣೆ ಮಾಡಿ ವಾದ ಮಂಡಿಸಿದ್ದರು.